ಇಂಡಿ ತಾಲೂಕಿನ ಮಸಳಿ ಗ್ರಾಮ ಪಂಚಾಯಿತಿಯಲ್ಲಿ ಎಇಇ ಆರ್.ಎಸ್. ಬಂಡಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಿದರು. ಪಿಡಿಒ ಅಶೋಕ ಹೊನವಾಡ ಮತ್ತಿತರರಿದ್ದಾರೆ.  
ಜಿಲ್ಲೆ

ಜೆಜೆಎಂ ಮಾಹಿತಿಯೂ ಇಲ್ಲ-ನೀರೂ ಇಲ್ಲ ! ಮಸಳಿ ಗ್ರಾಪಂಗೆ ಅಧಿಕಾರಿ ಭೇಟಿ, ತೀವ್ರ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ವಿಜಯಪುರ: ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯನ್ನೇ ನಿಯಮ ಬಾಹಿರವಾಗಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಕೊಂಡಿದ್ದು, ಜೆಜೆಎಂ ಎಂಬ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಅಧಿಕಾರಿಗಳ ನಡೆ ಪುಷ್ಠಿ ನೀಡುತ್ತಿದೆ !

ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಕೈಗೊಳ್ಳಲಾಗಿರುವ ಜಲ ಜೀವನ್ ಮಿಷನ್ ಕಾಮಗಾರಿ ಅಪೂರ್ಣವೂ ಮತ್ತು ಅವೈಜ್ಞಾನಿಕವಾಗಿದ್ದರೂ ರಾಜಕೀಯ ಒತ್ತಡದಿಂದಲೋ ಕಮಿಷನ್ ದಾಹದಿಂದಲೋ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಕೊಳ್ಳಲಾಗಿದ್ದು, ಪಾರದರ್ಶಕತೆ ಕಾಯ್ದುಕೊಳ್ಳದಿರುವುದು ಭ್ರಷ್ಟಾಚಾರದ ಆರೋಪ ನಿಜವಾಗಿ ಪರಿವರ್ತನೆಗೊಳ್ಳುತ್ತಿದೆ.

ಈ ಹಿಂದೆಯೇ ಕಾಮಗಾರಿಯಲ್ಲಿ ಭ್ರಷ್ಟಚಾರದ ಆರೋಪ ಕೇಳಿ ಬಂದ ಹಿನ್ನೆಲೆ ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತಲ್ಲದೇ ಆ. 19ರಂದು ‘ಮಸಳಿ ಗ್ರಾಮದಲ್ಲಿ ಜಲ ಜೀವನ್ ‘ಕ’ ಮಿಷನ್’ ತಲೆ ಬರಹದಡಿ ಫಾಲೋಅಪ್ ವರದಿ ಪ್ರಕಟಿಸುವ ಮೂಲಕ ಸರ್ಕಾರಿ ಅಧಿಕಾರಿಗಳು ಮತ್ತು ಲೋಕಾಯುಕ್ತದಂಥ ತನಿಖಾ ಸಂಸ್ಥೆಗಳ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಬಳಿಕ ಇಂಡಿಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ಆರ್.ಎಸ್. ಬಂಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದಾಗ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಮನೆ-ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಕಾಮಗಾರಿ ಕೈಗೊಂಡಿದ್ದು ಯೋಜನೆ ಅಪೂರ್ಣವಾಗಿದೆ. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲವಾದರೂ ಜೆಜೆಎಂ ಕಾಮಗಾರಿಯನ್ನು ಅನಧಿಕೃತವಾಗಿ ಗ್ರಾಮ ಪಂಚಾಯಿತಿ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕೆಳ ಹಂತದಿಂದ ಮೇಲಿನ ಹಂತದವರೆಗೂ ಅಧಿಕಾರಿಗಳ ಕೈವಾಡವಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಅಲ್ಲದೇ, ನೀರು ಸಂಗ್ರಹಗಾರ ಕಟ್ಟಿಯೇ ಇಲ್ಲವೆಂಬ ಗಂಭೀರ ಆರೋಪ ಕೇಳಿ ಬರುತ್ತಿದ್ದಂತೆ ಜಾಗದ ಅಭಾವದ ಕುರಿತು ಅಧಿಕಾರಿ ಪ್ರಸ್ತಾಪಿಸಿದರು. ಅಂದರೆ, ನೀರಿನ ತೊಟ್ಟಿ ಅಂದಾಜು ಪತ್ರಿಕೆಯಲ್ಲಿ ಇತ್ತಾ? ಇದ್ದರೂ ಕಟ್ಟಿಲ್ಲವಾ? ನೀರಿನ ತೊಟ್ಟಿ ಕಟ್ಟದೇ ಯೋಜನೆ ಹಸ್ತಾಂತರ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆಗಳಿಗೆ ಸ್ಥಳೀಯ ಅಧಿಕಾರಿಗಳ ಬಳಿ ಸಮರ್ಪಕ ಉತ್ತರವಿಲ್ಲ.

ಇನ್ನು ‘ರಾಜ್ಯಾದ್ಯಂತ ಜೆಜೆಎಂ ಕಾಮಗಾರಿ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾಗಿ ಕೆಲಸ ಮಾಡಿದ್ದಾರೆ. 10 ಲಕ್ಷ ಮೊತ್ತದ ಕಾಮಗಾರಿಗೆ 2 ಲಕ್ಷ ಹೆಚ್ಚುವರಿಯಾಗಿಯೂ ಒಂದು ಕೋಟಿ ವೆಚ್ಚದ ಕಾಮಗಾರಿಗೆ 15-20 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿ ಕೈಗೊಂಡಿದ್ದಾಗಿ‘ ಸಮಜಾಯಿಷಿ ನೀಡಿದ ಅಧಿಕಾರಿಯ ಮೈಚಳಿ ಬಿಡಿಸಿದ ಗ್ರಾಮಸ್ಥರು ‘ಹೆಚ್ಚುವರಿ ಹಣ ಹಾಕಿ ಕಾಮಗಾರಿ ಕೈಗೊಳ್ಳಲು ತಲೆ ಕೆಟ್ಟಿದೆಯೇ? ಹೊಲ-ಮನಿ ಮಾರಿ ಯಾರಾದರೂ ಕಾಮಗಾರಿ ಕೈಗೊಳ್ಳುತ್ತಾರೆಯೇ’ ಎಂದು ಹರಿಹಾಯ್ದರು. ಅಂತಿಮವಾಗಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಗೊಂಡ ಕಾಮಗಾರಿಯ ಮಾಹಿತಿ ಬಹಿರಂಗ ಪಡಿಸಬೇಕಲ್ಲದೇ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಿಯೇ ನಿಯಮಾನುಸಾರ ಗ್ರಾಮ ಪಂಚಾಯಿತಿ ಸದಸ್ಯರ ಸಹಮತದ ಮೇರೆಗೆ ಯೋಜನೆ ಹಸ್ತಾಂತರಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ಅಪೂರ್ಣವಾಗಿದ್ದರೂ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಕೊಳ್ಳುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಗಳು ಹಾಗೂ ತನಿಖಾ ಸಂಸ್ಥೆಗಳು ತನಿಖೆ ಕೈಗೊಳ್ಳಬೇಕೆಂಬ ಕೂಗು ಬಲಗೊಂಡಿದೆ.