ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆಯ ಮೂಲ ವ್ಯಾಪಾರಿಗಳಿಗೆ ಅನ್ಯಾಯವಾಗಲು ಯಾವ ಕಾರಣಕ್ಕೂ ಬಿಡುವುದಿಲ್ಲ, ಜಗತ್ತು ಪ್ರಳಯವಾದರೂ ಈ ವಿಚಾರದಲ್ಲಿ ರಾಜಿ ಆಗುವುದಿಲ್ಲ ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದರು.
ಸೋಮವಾರ ಸಂಜೆ ಕಟ್ಟಿನಕೆರೆ ಮಾರುಕಟ್ಟೆಗೆ ಭೇಟಿ ನೀಡಿದ ಅವರು ಮಾತನಾಡಿ, ಮಳಿಗೆ ಹಂಚಿಕೆ ಇ-ಹರಾಜು ಆಗಬೇಕು ಹಾಗೂ ಮೂಲ ವ್ಯಾಪಾರಿಗಳಿಗೆ ಸಿಗಬೇಕೆನ್ನುವುದು ನನ್ನ ಆದ್ಯತೆ. ಅದಕ್ಕಾಗಿ ಶಾಸಕ ಎಚ್.ಪಿ. ಸ್ವರೂಪ್ ಅವರ ಮನೆಗೆ ಭೇಟಿ ನೀಡಲು ಸಿದ್ಧನಿದ್ದೇನೆ. ಈ ವಿಚಾರದಲ್ಲಿ ಜಗತ್ತು ಪ್ರಳಯವಾದರೂ ಬಡವರಿಗೆ ತೊಂದರೆಯಾಗಲು ಬಿಡುವುದಿಲ್ಲ. ಮಾರುಕಟ್ಟೆಯಲ್ಲಿ 487 ಅಂಗಡಿಗಳಿದ್ದು ಇ-ಹರಾಜು ಆಗಬೇಕೆನ್ನುವುದು ವ್ಯಾಪಾರಿಗಳ ಬೇಡಿಕೆಯಾಗಿದೆ. ಮಂಗಳವಾರ ಬೆಳಗ್ಗೆ 10 ಗಂಟೆ ವೇಳೆಗೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.
ನಾನು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂದು ಹೇಳಿಕೊಂಡು ಬಂದಿಲ್ಲ. ನನ್ನನ್ನು ಪ್ರೀತಿ ಮಾಡುವವರು ಇರುವಷ್ಟು ದ್ವೇಷಿಸುವವರೂ ಇದ್ದಾರೆ. ನನಗೆ ಅದು ಯಾವತ್ತಿಗೂ ಮುಖ್ಯವಾಗುವುದಿಲ್ಲ. ಹತ್ತಾರು ವರ್ಷಗಳಿಂದ ಇಲ್ಲಿಯೇ ಜೀವನ ಕಟ್ಟಿಕೊಂಡಿರುವವರಿಗೆ ಅನ್ಯಾಯವಾಗಬಾರದು. ನಾನು ಮತ ಕೇಳಲು ಇಲ್ಲಿಗೆ ಬಂದಿಲ್ಲ. ಅದಕ್ಕೆ ಇನ್ನೂ ಮೂರು ವರ್ಷ ಸಮಯವಿದೆ ಎಂದರು.
ಹರಾಜು ಪ್ರಕ್ರಿಯೆಯಲ್ಲಿ ವ್ಯಾಪಾರಿಗಳಿಗೆ ಅನ್ಯಾಯವಾಗದಂತೆ ಕ್ರಮ ವಹಿಸಲು ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ. ಸ್ವರೂಪ್ ಅವರೊಂದಿಗೆ ಮಾತನಾಡುತ್ತೇನೆ. ನೀವು ಒಪ್ಪಿದರೆ ಈಗಲೇ ಶಾಸಕರ ಮನೆಗೆ ಬರುತ್ತೇನೆ. ಈ ನಿಟ್ಟಿನಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ನಾನು ಯಾವುದೇ ಮುಲಾಜಿಗೆ ಒಳಗಾಗುವುದಿಲ್ಲ. ಇಲ್ಲಿ ಮಳಿಗೆ ಬೇಕೆಂದು ಹೊರಗಡೆಯವರು ಬಂದರೆ ಅವರಿಗೆ ಕಾಫಿ, ಟೀ ಕೊಟ್ಟು ಸಮಾಧಾನ ಮಾಡಿಸೋಣ, ಅದಕ್ಕೆ ಒಪ್ಪದಿದ್ದರೆ ಪಕ್ಕಕ್ಕೆ ಕರೆದುಕೊಂಡು ಹೇಳುವ ಕೆಲಸ ಮಾಡುತ್ತೇನೆಂದು ಎಚ್ಚರಿಕೆ ನೀಡಿದರು.
ಸಂಸದ, ಶಾಸಕರಿಗಿಂತ ದೊಡ್ಡವರು ಯಾರೂ ಇಲ್ಲ. ಮೂಲ ವ್ಯಾಪಾರಿಗಳಿಗೆ ಅನುಕೂಲವಾಗಲಿ ಎಂಬುದಷ್ಟೇ ನನ್ನ ಉದ್ದೇಶ. ಇದರಲ್ಲಿ ರಾಜಕೀಯ ಬೆರೆಸುವ ಅವಶ್ಯಕತೆಯಿಲ್ಲ ಎಂದರು. ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಹಾಗೂ ಬಿಜೆಪಿ ಮುಖಂಡರಿದ್ದರು.