ಜಿಲ್ಲೆ

ಕಡಬಕ್ಕೆ ಸದ್ಯಕ್ಕಿಲ್ಲ ಇಂದಿರಾ ಕ್ಯಾಂಟೀನ್: ಪಟ್ಟಣ ಪಂಚಾಯಿತಿ ಗುರುತಿಸಿದ ಜಾಗ ತಿರಸ್ಕೃತ : ಪರ್ಯಾಯ ಸ್ಥಳವಿಲ್ಲ

ಸೌಮ್ಯ ಆರ್

ಪ್ರವೀಣ್‌ರಾಜ್ ಕೊೈಲ

ತಾಲೂಕು ಕೇಂದ್ರ ಕಡಬದಲ್ಲಿ ಬಹುನಿರೀಕ್ಷೆಯ ಇಂದಿರಾ ಕ್ಯಾಂಟೀನ್ ಸದ್ಯ ಆರಂಭಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಕಡಬ ಪಟ್ಟಣ ಪಂಚಾಯಿತಿ ಈಗಾಗಲೇ ಕ್ಯಾಂಟೀನ್‌ಗೆ ಗುರುತಿಸಿದ ಜಾಗ ತಿರಸ್ಕೃತಗೊಂಡಿದ್ದು, ಇದರಿಂದ ಜನರಿಗೆ ನಿರಾಸೆಯಾಗಿದೆ.

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಡಬವೂ ಸೇರಿದಂತೆ ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್‌ಗಳು ಕಾರ್ಯಾರಂಭಿಸಲಿವೆ ಎಂದು ಪ್ರಕಟಿಸಲಾಗಿತ್ತು. ಕಡಬ ಹೊಸ ತಾಲೂಕು ಆಡಳಿತ ಸೌಧ ಬಳಿಯಿರುವ ಎಪಿಎಂಸಿ ಪ್ರಾಂಗಣಕ್ಕೆ ಹೊಂದಿಕೊಂಡಿರುವಂತೆಯಿರುವ 5.5 ಸೆಂಟ್ಸ್ ಜಮೀನು ಇಂದಿರಾ ಕ್ಯಾಂಟೀನ್‌ಗೆ ನಿಗದಿಪಡಿಸಿದ್ದರೂ ಈ ಸ್ಥಳ ತಿರಸ್ಕಾರಗೊಂಡಿದೆ.

ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವೆಡೆ ಕ್ಯಾಂಟೀನ್ ಪ್ರಾರಂಭ ಮಾಡುವ ಪ್ರಕ್ರಿಯೆಗಳು ಆರಂಭಗೊಂಡಿದೆ. ಹೊಸ ತಾಲೂಕಾಗಿರುವ ಕಡಬದಲ್ಲಿಯೂ ಇಂದಿರಾ ಕ್ಯಾಂಟೀನ್‌ಗೆ ಸ್ಥಳ ನಿಗದಿಪಡಿಸಲಾಗಿತ್ತು. ಈ ಸ್ಥಳದ ಪಕ್ಕದಲ್ಲಿ ಕಡಬ ತಾಲೂಕು ಆಡಳಿತ ಸೌಧ, ಎಪಿಎಂಸಿ ಪ್ರಾಂಗಣವಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ನ್ಯಾಯಾಲಯ, ಉಪನೋಂದಣಿ ಕಚೇರಿಗಳು ಇದೇ ಪರಿಸರದಲ್ಲಿ ಆರಂಭಗೊಳ್ಳಲಿವೆ. ಹಾಗಾಗಿ ಈ ಪ್ರದೇಶ ಜನನಿಬಿಡವಾಗಲಿದೆ. ಈ ಕಾರಣಕ್ಕೆ ಕ್ಯಾಂಟೀನ್ ಅಲ್ಲೆ ತೆರೆಯುವುದು ಸೂಕ್ತವೆಂದು ನಿರ್ಧರಿಸಲಾಗಿತ್ತು.

ಆದರೆ ಈ ಸ್ಥಳ ಸೂಕ್ತವಲ್ಲ ಅಲ್ಲಿ ಕ್ಯಾಂಟೀನ್‌ಗೆ ಸಂಬಂಧಪಟ್ಟ ಮಷಿನ್‌ಗಳನ್ನು ಜೋಡಿಸಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಕೋಶದ ಇಂಜಿನಿಯಾರ್ ವರದಿ ನೀಡಿರುವುದರಿಂದ ಇಂದಿರಾ ಕ್ಯಾಂಟೀನ್‌ಗೆ ಹಿನ್ನಡೆಯಾಗಿದೆ.

ತಿರಸ್ಕೃತಗೊಂಡ ಎಪಿಎಂಸಿ ಪ್ರಾಂಗಣದ ಬಳಿ ಗುರುತಿಸಲಾದ ಜಾಗ.

ಕಡಬ ಸಮುದಾಯ ಆರೋಗ್ಯ ಕೇಂದ್ರದ ಬಳಿಯಿರುವ ಪ್ರವಾಸಿ ಮಂದಿರದ ಸ್ಥಳವನ್ನು ಗುರುತಿಸಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ವರದಿ ನೀಡಲಾಗಿದ್ದರೂ ಇದಕ್ಕೆ ಆಕ್ಷೇಪವಿದೆ ಎನ್ನಲಾಗಿದೆ. ಇದರ ಹೊರತಾಗಿ ಇದುವರೆಗೆ ಬದಲಿ ಜಾಗ ಗುರುತಿಸಲು ಸಾಧ್ಯವಾಗಿಲ್ಲ.

ಇತ್ತೀಚೆಗೆ ಕಡಬದಲ್ಲಿ ನಡೆದ ಜನತಾ ದರ್ಶನದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿತ್ತು. ಇದಕ್ಕೂ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಈಗಾಗಲೇ ರಾಜ್ಯದಲ್ಲಿ ಹೆಚ್ಚುವರಿಯಾಗಿ ಘೋಷಣೆ ಮಾಡಿದ ಇಂದಿರಾ ಕ್ಯಾಂಟೀನ್ ಪಟ್ಟಿಯಲ್ಲಿ ಕೂಡ ಕಡಬದ ಹೆಸರಿಲ್ಲ.

ಶೀಘ್ರ ಆರಂಭಕ್ಕೆ ಆಗ್ರಹ

ಬಡವರ ಜೇಬಿಗೆ ಹೊರೆಯಾಗದಂತೆ ಹಸಿವನ್ನು ತಣಿಸುವ ಇಂದಿರಾ ಕ್ಯಾಂಟೀನ್ ಕಡಬದಲ್ಲಿ ಶೀಘ್ರ ತೆರೆಯಲಿ ಎನ್ನುವುದು ಸ್ಥಳೀಯರ ಆಗ್ರಹ. ತಾಲೂಕು ಕೇಂದ್ರ ಕಡಬಕ್ಕೆ ತಾಲೂಕು ವ್ಯಾಪ್ತಿಯ 42 ಗ್ರಾಮಗಳ ಜನರು ವಿವಿಧ ಕೆಲಸಗಳಿಗೆ ಭೇಟಿ ನೀಡುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳು ಹಾಗು ರಾಜಕೀಯ ನಾಯಕರು ಈ ಕುರಿತು ಮುತುವರ್ಜಿ ವಹಿಸಿ ಕಡಬದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವಲ್ಲಿ ಪ್ರಯತ್ನಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಇಂದಿರಾ ಕ್ಯಾಂಟೀನ್ ತೆರೆಯಲು ಈಗಾಗಲೇ ಗುರುತಿಸಿದ ಜಮೀನು ಸೂಕ್ತವಲ್ಲ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶ ತಿರಸ್ಕರಿಸಿದೆ. ಕಡಬ ಸಮುದಾಯ ಆಸ್ಪತ್ರೆ ಬಳಿಯಿರುವ ಜಾಗವನ್ನು ಗುರುತಿಸಲಾಯಿತಾದರೂ ಅದಕ್ಕೆ ಅಕ್ಷೇಪ ವ್ಯಕ್ತವಾಗಿದೆ. ಕಡಬ ತಹಸೀಲ್ದಾರ್‌ಗೆ ಸೂಕ್ತ ಜಾಗ ನೀಡುವಂತೆ ಮನವಿ ಮಾಡಲಾಗಿದೆ. ಲೀಲಾವತಿ ಇ., ಮುಖ್ಯಾಧಿಕಾರಿಗಳು, ಕಡಬ ಪಟ್ಟಣ ಪಂಚಾಯಿತಿ