ಹಾನಗಲ್ಲ: ಅತಿವೃಷ್ಟಿಯಿಂದ ನೆರೆ ಬಂದು ಮನೆ ಕಳೆದುಕೊಂಡ ಫಲಾನುಭವಿಗಳು ಇನ್ನೂ ಬೇರೆಯವರ ಮನೆಗಳಲ್ಲಿ ವಾಸವಾಗಿದ್ದರೂ ಸರ್ಕಾರ ನಿರಾಶ್ರಿತರ ನೆರವಿಗೆ ಬಾರದಿರುವ ಹಲವು ಪ್ರಕರಣಗಳು ತಾಲೂಕಿನ ಮಾರನಬೀಡ ಗ್ರಾಮದಲ್ಲಿ ಬೆಳಕಿಗೆ ಬಂದಿವೆ. ಮಾರನಬೀಡದ ಫಲಾನುಭವಿಗಳ ಪ್ರದೇಶವೇ ಪಾಳುಬಿದ್ದಂತೆ ಕಂಡುಬರುತ್ತಿದೆ.
ಕಳೆದ ಆಗಸ್ಟ್, ಸೆಪ್ಟೆಂಬರ್ನಲ್ಲಿ ಸುರಿದ ಭಾರಿ ಮಳೆ ಹಾಗೂ ಧರ್ವ, ವರದಾ ನದಿಗಳ ಪ್ರವಾಹದಿಂದಾಗಿ ಮಾರನಬೀಡ ಗ್ರಾಮವೊಂದರಲ್ಲೇ ನೂರಾರು ಕುಟುಂಬಗಳು ನಿರಾಶ್ರಿತವಾಗಿವೆ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ಗ್ರಾಮಸ್ಥರು ಬೇರೆಯವರ ಸೂರಿನಲ್ಲಿ ಆಶ್ರಯ ಪಡೆಯುವಂತಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಅವರಿಗೆ ಮನವಿ ಸಲ್ಲಿಸಲಾಗಿದ್ದರೂ ಯಾರೂ ಫಲಾನುಭವಿಗಳ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಫಲಾನುಭವಿಗಳು ಅಳಲು ತೋಡಿಕೊಂಡಿದ್ದಾರೆ.
ಮಾರನಬೀಡ ಗ್ರಾಮದಲ್ಲಿ ಒಟ್ಟು 110 ಮನೆಗಳು ಕುಸಿದು ಬಿದ್ದಿರುವ ಕುರಿತು ಗ್ರಾಮಲೆಕ್ಕಾಧಿಕಾರಿಗಳು ಮಾಹಿತಿ ಸಲ್ಲಿಸಿದ್ದರು. ಇವರಲ್ಲಿ ಕೇವಲ ಏಳು ಫಲಾನುಭವಿಗಳ ಮನೆಗಳಿಗಾಗಿ ತಲಾ 5 ಲಕ್ಷ ರೂ. ಘೊಷಿಸಿದ್ದು, ಸದ್ಯ 1 ಲಕ್ಷ ರೂ. ಗಳನ್ನು ನೀಡಲಾಗಿದೆ. ಇನ್ನುಳಿದ ಕೆಲವು ಮನೆಗಳ ಫಲಾನುಭವಿಗಳಿಗೆ ಫೆ. 15ರಂದು ತಲಾ 50 ಸಾವಿರದಂತೆ ಪರಿಹಾರ ಹಾಕಲಾಗಿದೆ. ಆದರೆ, ಬಹಳಷ್ಟು ಫಲಾನುಭವಿಗಳ ಅರ್ಜಿಗಳನ್ನೇ ಅಪ್ಲೋಡ್ ಮಾಡದಿರುವುದು ಮತ್ತು ಅರ್ಜಿಗಳನ್ನು ನಿರಾಕರಣೆ ಮಾಡಿ ಮರಳಿಸಿರುವ ಘಟನೆಗಳ ಕುರಿತು ಆರೋಪಗಳು ಕೇಳಿಬಂದಿವೆ.
ಉಪವಿಭಾಗಾಧಿಕಾರಿಗಳು, ತಹಸೀಲ್ದಾರರ ಭೇಟಿ: ಅತಿವೃಷ್ಟಿ ಸಂದರ್ಭದಲ್ಲಿ ಸವಣೂರು ಉಪವಿಭಾಗಾಧಿಕಾರಿಗಳು ಭೇಟಿ ನೀಡಿ ಫಲಾನುಭವಿಗಳ ಮನೆ-ಮನೆಯನ್ನೂ ವೀಕ್ಷಿಸಿ ಸಾಂತ್ವನ ಹೇಳಿ, ಅವರನ್ನೆಲ್ಲ ತಕ್ಷಣ ಸ್ಥಳಾಂತರಗೊಳಿಸಲು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ವರದಾ ನದಿಯಿಂದ ನೀರು ತುಂಬಿಕೊಂಡಿದ್ದ ಮನೆಗಳ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ. ಗಳ ಪರಿಹಾರ ಒದಗಿಸುವ ಭರವಸೆಯನ್ನೂ ನೀಡಿದ್ದರು. ಅಧಿಕಾರಿಗಳ ಭರವಸೆ ನಂಬಿ ಫಲಾನುಭವಿಗಳು ಬಿದ್ದ ಮನೆಗಳನ್ನು ನೆಲಸಮಗೊಳಿಸಿ, ಅಲ್ಲಿ ಹೊಸ ಮನೆ ನಿರ್ವಿುಸಿಕೊಳ್ಳಲು ಅಡಿಪಾಯ ಹಾಕಿದ್ದರು. ಸರ್ಕಾರದ ಪರಿಹಾರದತ್ತ ಮುಖ ಮಾಡಿ ನಾಲ್ಕೈದು ತಿಂಗಳುಗಳೇ ಕಳೆದಿವೆ. ಆದರೆ, ನಂತರ ಯಾವೊಬ್ಬ ಅಧಿಕಾರಿಯಾಗಲೀ ಜನಪ್ರತಿನಿಧಿಯಾಗಲೀ ಇವರತ್ತ ತಿರುಗಿಯೂ ನೋಡಿಲ್ಲ.
ಮೂವರಲ್ಲಿ ಒಬ್ಬರಿಗೇ ಪರಿಹಾರ: ಒಂದು ಮನೆನತನ ಶಂಕ್ರಪ್ಪ ಕುಂದಗೋಳ, ಬಸಪ್ಪ ಕುಂದಗೋಳ, ನಾಗಪ್ಪ ಕುಂದಗೋಳ ಎಂಬ ಮೂರು ಕುಟುಂಬಗಳವರು ಪ್ರತ್ಯೇಕವಾಗಿ ವಾಸಿಸುತ್ತಿದ್ದ ಹಳೆಯ ಮನೆ ಬಿದ್ದುಹೋಯಿತು. ಮೂವರೂ ಅರ್ಜಿ ಸಲ್ಲಿಸಿದ್ದರು. ಆದರೆ, ಇವರಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ಮಂಜೂರಾಗಿದೆ. ಇನ್ನಿಬ್ಬರಿಗೆ ಬಿಡಿಗಾಸೂ ಬಂದಿಲ್ಲ. ಇದರಿಂದಾಗಿ ಅಕ್ಷರಶಃ ಇವರು ನಿರಾಶ್ರಿತರಾಗಿದ್ದಾರೆ. ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಬಾಡಿಗೆಗೆ ಸಿಗದವರು ಇನ್ನೂ ಬಿದ್ದ ಮನೆಗಳಿಗೆ ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಕಿಕೊಂಡು ಅಲ್ಲಿಯೇ ವಾಸವಾಗಿದ್ದಾರೆ. ಬೀಳುವ ಸ್ಥಿತಿಯಲ್ಲಿರುವ ಮನೆಗಳಲ್ಲಿಯೇ ಜೀವಭಯದೊಂದಿಗೆ ದಿನಕಳೆಯುತ್ತಿದ್ದಾರೆ.
ಗ್ರಾಪಂ ಕಚೇರಿಗೆ ಬೀಗ-ಪ್ರತಿಭಟನೆ: ಗ್ರಾಮದಲ್ಲಿ ನೂರಾರು ಜನ ನಿರಾಶ್ರಿತರಾಗಿ, ಸಮಸ್ಯೆಯಲ್ಲಿ ಸಿಲುಕಿ ದಿನಕಳೆಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ತೆರೆಯುತ್ತಿಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟಿನೆ ಕೈಗೊಳ್ಳುವುದಾಗಿ ಗ್ರಾಮದ ಪ್ರಮುಖರಾದ ಅಶೋಕ ಸಂಶಿ, ರವಿ ರ್ನೆಮನಿ, ಮಾರುತಿ ಸಂಶಿ, ಪುಟ್ಟಪ್ಪ ಗಂಜೀಗಟ್ಟಿ, ಸಂಜೀವ ಮಣಕಟ್ಟಿ, ತಿರಕಪ್ಪ ವಡ್ರ, ಈರಪ್ಪ ಕಳ್ಳಿಮನಿ, ಶಂಕ್ರಪ್ಪ ನವಣಿ, ಮಾಲತೇಶ ಸುಂಕದ ಎಚ್ಚರಿಸಿದ್ದಾರೆ.
ಅತಿವೃಷ್ಟಿ ಸಂದರ್ಭದಲ್ಲಿ ಇಡೀ ಗ್ರಾಮದಲ್ಲಿ ಸುತ್ತಾಡಿ, ಎಲ್ಲ ಮನೆಗಳನ್ನೂ ವೀಕ್ಷಿಸಿ, ಪೂರ್ಣ ಭರವಸೆ ನೀಡಿದ್ದ ಕಂದಾಯ ಇಲಾಖೆ ಅಧಿಕಾರಿಗಳನ್ನು ನಂಬಿ ಕೆಟ್ಟೆವು. ಅವರ ನಿರ್ದೇಶನದಂತೆ ಎಲ್ಲ ದಾಖಲೆಗಳನ್ನೂ ನೀಡಿದ್ದೇವೆ. ಆದರೂ ಪರಿಹಾರ ಬಂದಿಲ್ಲ. ಈಗ ಯಾರನ್ನು ಕೇಳಿದರೂ ಯಾರೂ ಸ್ಪಂದಿಸುತ್ತಿಲ್ಲ.| ಅಶೋಕ ಸಂಶಿ, ಮಾರನಬೀಡ ಗ್ರಾಮಸ್ಥ