ಚನ್ನರಾಯಪಟ್ಟಣ : ವಿದ್ಯಾರ್ಥಿಗಳ ಜೀವನದಲ್ಲಿ ಗುರಿ ಮುಖ್ಯ. ಆದರೆ ಪ್ರಯತ್ನ ಇಲ್ಲದೇ ಗುರಿ ಮುಟ್ಟಲು ಸಾಧ್ಯವೇ ಇಲ್ಲ. ಸತತ ಪ್ರಯತ್ನದಿಂದ ಗುರಿ ಮುಟ್ಟುವುದಕ್ಕೆ ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ತಾಲೂಕು ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ 2024-25 ನೇ ಸಾಲಿನ ಚನ್ನರಾಯಪಟ್ಟಣ ವಿಭಾಗ ಹಾಗೂ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿವಿಧ ವಿಭಾಗಗಳ ಆರು ದಿನ ಆಯೋಜಿಸಿರುವ ಕ್ರೀಡಾಕೂಟವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ದೇಶಕ್ಕಾಗಿ ಪದಕ ಗೆಲ್ಲಲೇಬೇಕೆಂದು ಸತತ ಪ್ರಯತ್ನದಿಂದ ಹೋರಾಡಿ ಬೆಳ್ಳಿ ಪದಕ ಗೆದ್ದರು. ಕ್ರೀಡಾಪಟುಗಳು ನಿರಂತರ ಅಭ್ಯಾಸ ಮಾಡಿದರೆ ಮಾತ್ರ ಸಾಧನೆ ಮಾಡದ ಸಾಧ್ಯ ಎಂದರು.
ನಮ್ಮಲ್ಲಿ ಉತ್ತಮ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ಆದರೆ ಅವರಿಗೆ ಸೌಲಭ್ಯ ಮತ್ತು ಪ್ರೋತ್ಸಾಹದ ಕೊರತೆ ಇದೆ. ಗ್ರಾಮೀಣ ಭಾಗದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ, ಸೌಕರ್ಯಗಳು ಲಭ್ಯವಾಗುತ್ತಿಲ್ಲ. ಒಲಿಂಪಿಕ್ಸ್‌ನಲ್ಲಿ ಭಾರತ ಹೆಚ್ಚಿನ ಸಾಧನೆ ಏಕೆ ಮಾಡಿಲ್ಲ ಎಂಬುದನ್ನು ಕ್ರೀಡಾಪಟುಗಳನ್ನು ಪ್ರಶ್ನಿಸುವ ಬದಲು ಅಧಿಕಾರಿಗಳನ್ನು ಪ್ರಶ್ನಿಸುವುದು ಸೂಕ್ತ ಎಂದರು.
ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಿದರೆ ಉದ್ಯೋಗ ಅವಕಾಶಗಳು ಸಿಗುತ್ತವೆ ಎಂಬುದನ್ನು ಮನದಲ್ಲಿ ಇಟ್ಟುಕೊಳ್ಳಬೇಕು. ಖಾಸಗಿ ಕಂಪನಿಗಳು, ಬ್ಯಾಂಕ್‌ಗಳು ಉತ್ತಮ ಕ್ರೀಡಾಪಟುಗಳಿಗೆ ಉದ್ಯೋಗ ನೀಡುತ್ತವೆ. ಸದೃಢ ಮನಸ್ಸು ಹಾಗೂ ಸಧೃಡ ಆರೋಗ್ಯ ಹೊಂದಲು ಕ್ರೀಡೆ ಸಹಕಾರಿಯಾಗಿದೆ. ಆರೋಗ್ಯವಂತ ಮನಸ್ಸು ಇದ್ದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಬಹುದು. ಕ್ರೀಡಾಪಟುಗಳು ಸೋಲು-ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಕೆ.ಪಾಂಡು, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಅನಿಲ್ ಕುಮಾರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಹದೇವ್, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಟಿ.ಮಂಜಪ್ಪ, ನಿರ್ದೇಶಕ ಸುರೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜಿ.ಮಲ್ಲೇಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.ಅನಿಲ್ ಕುಮಾರ್, ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಸಂಘಟನಾ ಸಹ ಕಾರ್ಯದರ್ಶಿ ದೇವರಾಜೇಗೌಡ, ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕ ಹಾಗೂ ಕ್ರೀಡಾಕೂಟದ ಕಾರ್ಯದರ್ಶಿ ಕೆ.ಟಿ.ಆನಂದ್, ಸಂಘಟನಾ ಕಾರ್ಯದರ್ಶಿ, ಡಿ.ಬಿ.ಮಂಜುನಾಥ್, ಸಂಘಟನಾ ಅಧ್ಯಕ್ಷರು ಜಿ.ಟಿ.ರವಿಕುಮಾರ್, ಖಜಾಂಚಿ ಡೇನಿಯಲ್ ರೋನಾಲ್ಡ್ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.