ಮೈಸೂರು: ಲಾಕ್‌ಡೌನ್‌ನಿಂದ ಮುಂದೂಡಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಗುರುವಾರ ಜಿಲ್ಲೆಯ 50 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. ಪರೀಕ್ಷಾ ಕೇಂದ್ರದ ಒಳಗೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಎಲ್ಲ ಸಿದ್ಧತೆ ಕೈಗೊಳ್ಳಲಾಗಿತ್ತು. ಆದರೆ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುವ ಸಂದರ್ಭದಲ್ಲಿ ಜಿಲ್ಲೆಯ ಹಲವು ಕಡೆಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ಅಂತರ ಮರೆತರು.
ಪರೀಕ್ಷಾ ಕೇಂದ್ರ ಪ್ರವೇಶಿಸಲು ವಿದ್ಯಾರ್ಥಿಗಳು ಏಕ ಕಾಲದಲ್ಲಿ ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಆದಷ್ಟು ಬೇಗ ಪರೀಕ್ಷಾ ಕೇಂದ್ರ ಪ್ರವೇಶಿಸಬೇಕೆಂಬ ಒತ್ತಡ ವಿದ್ಯಾರ್ಥಿಗಳ ಮನದಲ್ಲಿದ್ದ ಹಿನ್ನೆಲೆಯಲ್ಲಿ ಬಹುತೇಕ ಕಡೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ವಿದ್ಯಾರ್ಥಿಗಳು ಗುಂಪುಗೂಡಿ ನಿಂತಿದ್ದ ದೃಶ್ಯಗಳು ಎಲ್ಲರನ್ನು ಬೆಚ್ಚಿ ಬೀಳಿಸುವ ರೀತಿಯಲ್ಲಿ ಇತ್ತು. ಹಲವು ಕೇಂದ್ರಗಳಲ್ಲಿ ‘ಪರಸ್ಪರ ಅಂತರ’ ಎಂಬುದು ಕೇವಲ ಹೇಳಿಕೆಗಷ್ಟೇ ಸೀಮಿತವಾಗಿತ್ತು. ಪರೀಕ್ಷಾ ಕೇಂದ್ರದ ಆವರಣದಲ್ಲಿ ವಿದ್ಯಾರ್ಥಿಗಳ ರೋಲ್ ನಂಬರ್ ಹಾಕಲಾಗಿತ್ತು. ಅಲ್ಲೂ ಕೂಡ ವಿದ್ಯಾರ್ಥಿಗಳು ರೋಲ್ ನಂಬರ್ ತಿಳಿದುಕೊಳ್ಳಲು ಗುಂಪುಗೂಡಿ ನಿಂತಿದ್ದ ದೃಶ್ಯಗಳು ಕಂಡು ಬಂತು.
ಪರೀಕ್ಷಾ ಕೇಂದ್ರದ ಹೊರ ಭಾಗದಲ್ಲಿ ವಿದ್ಯಾರ್ಥಿಗಳು ಸಾಲಿನಲ್ಲಿ ನಿಂತು ತಪಾಸಣೆಗೆ ಒಳಪಟ್ಟ ನಂತರ ಪರೀಕ್ಷಾ ಕೇಂದ್ರದ ಆವರಣ ಪ್ರವೇಶಿಸಿದರು. ತಪಾಸಣೆಗೆ ಸಾಕಷ್ಟು ಸಮಯ ತೆಗೆದುಕೊಂಡ ಹಿನ್ನೆಲೆಯಲ್ಲಿ ಉದ್ದನೆ ಸಾಲುಗಳು ಕಂಡು ಬಂದವು. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಒತ್ತು ನೀಡಲಾಗಿತ್ತು.
ನಗರದ 26 ಹಾಗೂ ಗ್ರಾಮಾಂತರ ಭಾಗದಲ್ಲಿ 24 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಒಟ್ಟು 31,569 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಾಗಿತ್ತು. ಆದರೆ, ವಿವಿಧ ಕಾರಣಗಳಿಂದ 27 ವಿದ್ಯಾರ್ಥಿಗಳು ಗೈರು ಹಾಜರಾದರು. ಹೊರ ಜಿಲ್ಲೆಯ 452 ವಿದ್ಯಾರ್ಥಿಗಳು ಜಿಲ್ಲೆಗೆ ಆಗಮಿಸಿದ್ದು, ಅವರಿಗೆ ಇಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಯಿತು. ಹೊರ ರಾಜ್ಯದ 9 ವಿದ್ಯಾರ್ಥಿಗಳು ನಗರದಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 6 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ಉಳಿದ ವಿದ್ಯಾರ್ಥಿಗಳು ತಮ್ಮ ರಾಜ್ಯಕ್ಕೆ ಮರಳಿದ ಹಿನ್ನೆಲೆಯಲ್ಲಿ ಪರೀಕ್ಷೆ ಎದುರಿಸಲು ಸಾಧ್ಯವಾಗಲಿಲ್ಲ.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ಹರಡದ ರೀತಿಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳು ಅಸ್ವಸ್ಥಗೊಂಡರೆ ಅವರನ್ನು ಉಪಚರಿಸಲು ಪ್ರತ್ಯೇಕ ಕೊಠಡಿಗಳು ಹಾಗೂ ಜ್ವರದಿಂದ ಬಳಲುವ ವಿದ್ಯಾರ್ಥಿಗಳು ಆಗಮಿಸಿದರೆ ಅವರಿಗೆ ಪರೀಕ್ಷೆ ಎದುರಿಸಲು ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು.
ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಎಲ್ಲ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಕೇಂದ್ರಕ್ಕೆ ಆಗಮಿಸುತ್ತಿದ್ದಂತೆಯೇ ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರೀಕ್ಷೆ ನಡೆಸಿ ನಂತರ ಸ್ಯಾನಿಟೈಸರ್ ನೀಡಲಾಯಿತು. ಪರೀಕ್ಷಾ ಕೊಠಡಿಗಳಲ್ಲಿ 3 ಅಡಿ ಅಂತರದಲ್ಲಿ ಒಂದು ಬೆಂಚ್ ಅಳವಡಿಸಲಾಗಿತ್ತು. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು. ಪರೀಕ್ಷಾ ಉಸ್ತುವಾರಿ ವಹಿಸಿಕೊಂಡವರು ಕೈಗಳಿಗೆ ಸ್ಯಾನಿಟೈಸರ್ ಹಚ್ಚಿಕೊಂಡ ನಂತರವಷ್ಟೇ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಇದು ಪಾಠ: ಕರೊನಾ ನಡುವೆ ಪರೀಕ್ಷೆ ಯಾವ ರೀತಿ ಎದುರಿಸಬೇಕು ಹಾಗೂ ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದಕ್ಕೆ ಗುರುವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಒಂದು ಪಾಠವಾಗಿದೆ. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಗುಂಪು ಗೂಡುವುದನ್ನು ತಡೆಯಲು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಇದಕ್ಕೆ ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಅವಶ್ಯಕತೆ ಇದೆ. ಜೂ.24 ರಿಂದ ಜು.4ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಆ ಸಂದರ್ಭ ಇಂಥ ತಪ್ಪುಗಳು ಆಗದಂತೆ ಎಚ್ಚರ ವಹಿಸುವ ಅವಶ್ಯಕತೆ ಇದೆ.
11 ವಿದ್ಯಾರ್ಥಿಗಳಿಗೆ ಜ್ವರ: ನಂಜನಗೂಡಿನ ಪರೀಕ್ಷಾ ಕೇಂದ್ರವೊಂದರಲ್ಲಿ ಜ್ವರದಿಂದ ಬಳಲುತ್ತಿದ್ದ 11 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಆಗಮಿಸಿದರು. ಒಂದುವೇಳೆ 11 ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಇದ್ದರೆ ಅದು ಇತರ ವಿದ್ಯಾರ್ಥಿಗಳಿಗೂ ಹರಡುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಅವರಿಗೆ ಪ್ರತ್ಯೇಕವಾದ ಪರೀಕ್ಷಾ ಕೊಠಡಿಯನ್ನು ನೀಡಲಾಗಿತ್ತು.