ಜಿಲ್ಲೆ

ಸ್ಮಾರ್ಟ್​ ಸಿಟಿಯಲ್ಲಿ ಇಲ್ಲ ಕಾರಂಜಿ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಗಳು ಸ್ಮಾರ್ಟ್ ಸಿಟಿ ಅಡಿ ಅಭಿವೃದ್ಧಿ ಹೊಂದಿವೆ. ಇನ್ನೂ ಹೊಂದುತ್ತಲೂ ಇವೆ. ಇಂತಹ ಸ್ಮಾರ್ಟ್ ಹೆಸರಿನ ಸಿಟಿಯಲ್ಲಿ ಎಲ್ಲಿಯೂ ಒಂದೇ ಒಂದು ಚೇತೋಹಾರಿ ಕಾರಂಜಿಗಳು ಕಾಣುವುದಿಲ್ಲ.

ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮ್ಯೂಸಿಕಲ್ ಫೌಂಟೇನ್ ಅಳವಡಿಸಲಾಗಿತ್ತು. ಅದು ನೋಡುಗರನ್ನು ಕೈಬೀಸಿ ಕರೆಯುತ್ತಿತ್ತು. ಆದರೆ, ಕೆಲ ತಿಂಗಳಿಂದ ಅದು ಬಂದ್ ಆಗಿದ್ದು, ಫೌಂಟೇನ್ ಬರಡಾಗಿದೆ.

ಅಲ್ಲದೇ ತೋಳನಕೆರೆ ಹತ್ತಿರ, ಶಿರೂರ್ ಪಾರ್ಕ್ ಕೊನೆಯ ಹಂತದಲ್ಲಿ ಕಾರಂಜಿ ಅಳವಡಿಸಲಾಗಿತ್ತು. ಅವುಗಳೆಲ್ಲ ಶುರುವಾಗಿ ಸ್ವಲ್ಪ ದಿನದಲ್ಲೇ ಮರೆತು ಹೋದವು. ಸಂಜೆ ಹೊತ್ತಿನಲ್ಲಿ ನಯನ ಮನೋಹರವಾಗಿ ಕಾರಂಜಿಯ ದೃಶ್ಯ ನೋಡಿ ಆನಂದಿಸಲು ಬರುತ್ತಿದ್ದ ಜನರು ವ್ಯಥೆ ಪಡುವಂತಾಗಿದೆ.

ಏನಪ್ಪಾ ಹುಬ್ಬಳ್ಳಿ ಧಾರವಾಡದ ಕಥೆ? ಎಂದು ಬೇಸರ ಪಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳಿಗೆ ಇದರ ಬಗ್ಗೆ ಒಂದಿಷ್ಟೂ ಆಲೋಚನೆ ಇಲ್ಲವೆ? ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ನಗರದ ಸೌಂದರ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡುವ ಬಗ್ಗೆ ಮಹಾನಗರ ಪಾಲಿಕೆ ಚಿಂತಿಸಬೇಕು. ಇಲ್ಲವೇ ಹುಬ್ಬಳ್ಳಿ ಎಂದರೆ ಹೀಗೆ ಧೂಳೂಮಯ, ಬರಡುಮಯ ಎನ್ನುವಂತಾಗಬಾರದು. ಈ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ.
- ಲಿಂಗರಾಜ್ ಧಾರವಾಡಶೆಟ್ಟರ್, ಸಾಮಾಜಿಕ ಹೋರಾಟಗಾರರು.