ಜಿಲ್ಲೆ

ಬಲ್ಕ್ ಕಸ ಉತ್ಪಾದಕರೆಂದು ಘೋಷಿಸಿಕೊಂಡವರಿಗಿಲ್ಲ ಶುಲ್ಕ

ಆರ್.ತುಳಸಿಕುಮಾರ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸಗಟು (ಬಲ್ಕ್) ಕಸ ಉತ್ಪಾದಕರೆಂದು ಘೋಷಿಸಿಕೊಳ್ಳುವ ಬೃಹತ್ ಸ್ವತ್ತುದಾರರಿಗೆ ಬಳಕೆದಾರರ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ಈ ಅಂಶವನ್ನು ಇಂತಹ ಸ್ವತ್ತುದಾರರು ಆಸ್ತಿತೆರಿಗೆ ಪೋರ್ಟಲ್‌ನಲ್ಲಿ ಮಾಹಿತಿ ನಮೂದಿಸಿದರೆ ಮಾತ್ರ ಶುಲ್ಕ ವಿನಾಯಿತಿ ಪಡೆಯಬಹುದಾಗಿದೆ.

ಕಳೆದ ಏ.1ರಿಂದ ಎಲ್ಲ ಸ್ವತ್ತುದಾರರಿಗೆ ಬಳಕೆದಾರರ ಶುಲ್ಕ ಅನ್ವಯಿಸಲಾಗಿದೆ. ಕಸ ಉತ್ಪತ್ತಿ ಆಧರಿಸಿ ಇಂತಿಷ್ಟು ಶುಲ್ಕ ನಿಗದಿಪಡಿಸಲಾಗಿದೆ. ವಸತಿ ಸಮುಚ್ಛಯಗಳಲ್ಲಿ 100 ಘಟಕಗಳುಳ್ಳ, 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವವರು ಹಾಗೂ 5 ಸಾವಿರ ಚದರ ಅಡಿ ವಿಸ್ತೀರ್ಣಕ್ಕಿಂತ ಹೆಚ್ಚಿನ ಸ್ವತ್ತುದಾರರನ್ನು ಬಲ್ಕ್ ಉತ್ಪಾದಕರ ಗುಂಪಿಗೆ ಸೇರಿಸಲಾಗಿದೆ. ಈ ವರ್ಗದಲ್ಲಿ ಅತ್ಯಧಿಕ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದನ್ನು ವಿಲೇವಾರಿ ಮಾಡಲು ಪಾಲಿಕೆಗೆ ಹಲವು ಸಮಸ್ಯೆ ಎದುರಾಗಿದೆ. ಹಾಗಾಗಿ ಈ ವರ್ಗದ ಸ್ವತ್ತುದಾರರು ಕಸವನ್ನು ಮೂಲದಲ್ಲೇ ವಿಂಗಡಿಸಿ ಸ್ವಯಂ ವಿಲೇವಾರಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ರೀತಿ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ ವಿಲೇವಾರಿ ಮಾಡುವವರಿಗೆ ಬಳಕೆದಾರರ ಶುಲ್ಕವನ್ನು ವಿಧಿಸುವುದಿಲ್ಲ. ಈ ನಿಯಮ ಪಾಲಿಸದಿದ್ದರೆ ಪ್ರತಿ ಕೆಜಿಗೆ 12 ರೂ.ನಂತೆ ಶುಲ್ಕ ಪಾವತಿಸಬೇಕಾಗುತ್ತದೆ. ಕೆಲವರು ಶುಲ್ಕದಿಂದ ವಿನಾಯಿತಿ ಪಡೆಯಲು ಬಲ್ಕ್ ಉತ್ಪಾದಕರೆಂದು ಬಿಂಬಿಸಿಕೊಂಡಿದ್ದಾರೆ. ಇಂತಹವರಿಂದ ಪಾಲಿಕೆಗೆ ಆದಾಯ ಸೋರಿಕೆಯಾಗುತ್ತಿದೆ. ಹಾಗಾಗಿ ನೈಜ ಸ್ವತ್ತುದಾರರಿಗೆ ಮಾತ್ರ ಶುಲ್ಕ ವಿನಾಯಿತಿ ನೀಡಲು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸುವುದು ಅಗತ್ಯವಾಗಿದೆ. ಹೆಸರು ೋಷಿಸಿಕೊಳ್ಳುವುದನ್ನು ಕಡ್ಡಾಯ ಮಾಡದಿದ್ದರೂ, ಆಯ್ಕೆಯನ್ನು ಸ್ವತ್ತುದಾರರ ವಿವೇಚನೆಗೆ ಬಿಡಲಾಗಿದೆ.

ತಪ್ಪು ನಮೂದಿಗೆ ಕಾದಿದೆ ದಂಡ:

ಬಲ್ಕ್ ಕಸ ಉತ್ಪಾದಕರೆಂದು ಘೋಷಿಸಿಕೊಳ್ಳುವ ಸ್ವತ್ತುದಾರರ ನೈಜತೆ ಪರಿಶೀಲಿಸಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್‌ಡಬ್ಲ್ಯುಎಂಎಲ್) ಚಿಂತನೆ ನಡೆಸಿದೆ. ಪಾಲಿಕೆಯ ಕಂದಾಯ ವಿಭಾಗವು ನೀಡುವ ದತ್ತಾಂಶ ಆಧರಿಸಿ ಖುದ್ದು ಇಂತಹ ಸ್ವತ್ತುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಆ ವೇಳೆ ತಪ್ಪು ಮಾಹಿತಿ ನೀಡಿ ನಿಯಮ ಉಲ್ಲಂಸಿದ್ದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಲ್ಕ್ ಕಸ ಉತ್ಪಾದಕರು ಯಾರು?:

* 100 ಘಟಕಗಳಿಗಿಂತ ಹೆಚ್ಚಿರುವ ವಸತಿ ಸಮುಚ್ಛಯ

* 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವವರು

* 5 ಸಾವಿರ ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಸ್ವತ್ತುದಾರರು