ಜಿಲ್ಲೆ

ಜಿಲ್ಲೆಗಿಲ್ಲ ಇಎಸ್‌ಐ ಆಸ್ಪತ್ರೆ ಭಾಗ್ಯ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಜಿಲ್ಲೆಗೆ 150 ಕೋಟಿ ರೂ. ವೆಚ್ಚದಲ್ಲಿ 32 ವಸತಿ ಗೃಹ ಸಹಿತ 100 ಹಾಸಿಗೆಗಳ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ (ಇಎಸ್‌ಐ) ಮಂಜೂರಾಗಿ ಮೂರು ವರ್ಷ ಕಳೆದರೂ ಕಟ್ಟಡ ನಿರ್ಮಾಣ ಕಾಮಗಾರಿಗೆ ಇನ್ನೂ ಮೀನಮೇಷ ಎಣಿಸುವಂತಿದೆ. ಹೀಗಾಗಿ ಜಿಲ್ಲೆಯ ಲಕ್ಷಾಂತರ ಕಾರ್ಮಿಕರು ತಮ್ಮ ಹಕ್ಕಿನ ಆಸ್ಪತ್ರೆಗಾಗಿ ಕಾಯುವಂತಾಗಿದೆ.

ಉಡುಪಿಯ ವಾರಂಬಳ್ಳಿಯಲ್ಲಿ 6 ಎಕರೆ ಜಾಗವನ್ನು ಈಗಾಗಲೇ ಮೀಸಲಿಡಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಟೆಂಡರ್ ಆರಂಭವಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಮೂರು ವರ್ಷಗಳ ಹಿಂದೆ ಜಿಲ್ಲೆಗೆ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ (ಇಎಸ್‌ಐ) ಮಂಜೂರುಗೊಂಡಾಗ ಜಿಲ್ಲೆಯ ಕಾರ್ಮಿಕ ವರ್ಗ ಹರ್ಷಪಟ್ಟಿದ್ದರು. ಆದರೆ ಈಗ ಆಸ್ಪತ್ರೆ ನಿರ್ಮಾಣ ಮಾತ್ರ ಬರೀ ಕನಸಿನ ಮಾತಾಗಿಯೇ ಉಳಿದುಕೊಂಡಿದೆ. ಸುಮಾರು 60 ಸಾವಿರಕ್ಕಿಂತ ಹೆಚ್ಚು ಇಎಸ್‌ಐ ಸದಸ್ಯರಿದ್ದ ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಿಸಲು ಅವಕಾಶವಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಲಕ್ಷಾಂತರ ಮಂದಿ ಕಾರ್ಮಿಕರಿದ್ದರೂ ಆಸ್ಪತ್ರೆ ನಿರ್ಮಾಣ ಮಾತ್ರ ಗಗನ ಕುಸುಮವಾಗಿದೆ. ಇಲ್ಲಿ ಲಕ್ಷಾಂತರ ಮಂದಿ ಕಾರ್ಮಿಕರು ಇಎಸ್‌ಐ ಸೌಲಭ್ಯ ಹೊಂದಿದ್ದಾರೆ. ಆದರೆ, ಅವರಿಗೆ ಇಎಸ್‌ಐ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರ ಶಿಫಾರಸ್ಸಿನ ಮೇರೆಗೆ ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಮಂಜೂರುಗೊಂಡಿತ್ತು. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಕ್ಕೆ ಇನ್ನೂ ಮುಹೂರ್ತ ಸಿಕ್ಕಿಲ್ಲ.

 ಜನರಲ್ ದಾಖಲಾತಿ ಸ್ಥಗಿತ

ಕಾರ್ಮಿಕ ವಿಮಾ ಯೋಜನೆಯ (ಇಎಸ್‌ಐ) ಜನರಲ್ ಸೇವೆಯನ್ನು ಸರ್ಕಾರ ನವೀಕರಣಗೊಳಿಸದ ಪರಿಣಾಮ ಡಿ.1ರಿಂದ ರಾಜ್ಯದಲ್ಲಿ ದಾಖಲಾತಿ ಸ್ಥಗಿತಗೊಂಡಿದ್ದು, ಜಿಲ್ಲೆಯ ಕಾರ್ಮಿಕರಿಗೂ ಅದರ ಬಿಸಿ ತಟ್ಟಿದೆ. 2023ರಲ್ಲಿ ಮಾಡಿಕೊಂಡ ಜನರಲ್ ಆರೋಗ್ಯ ಸೇವೆ ಒಪ್ಪಂದ 2014ರ ನ.30ಕ್ಕೆ ಅಂತ್ಯವಾಗಿದ್ದು, ಎಂ.ಒ.ಯು. ಮರು ನವೀಕರಣ ಪ್ರಕ್ರಿಯೆಗಳು ಪ್ರಾರಂಭವಾಗದೆ ಕಾರ್ಮಿಕ ವಲಯದ ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡಿದೆ.

ಇಎಸ್‌ಐ ಆಸ್ಪತ್ರೆಗಳನ್ನು ಬಹುತೇಕ ಕಡೆ ರಾಷ್ಟ್ರ ಮಟ್ಟದ ಇಎಸ್‌ಐ ನಿಗಮದಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಯ ನಿರ್ವಹಣೆಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕು ಎಂಬ ಬೇಡಿಕೆ ಇದೆ. ರಾಷ್ಟ್ರ ಮಟ್ಟದಲ್ಲಿ ನೇಮಕಾತಿ ನಡೆದರೆ ಸ್ಥಳೀಯರಿಗೆ ಅವಕಾಶ ಸಿಗುವುದಿಲ್ಲ. ರಾಜ್ಯ ಸರ್ಕಾರ ವಹಿಸಿಕೊಂಡರೆ ಸ್ಥಳೀಯ ನೇಮಕಾತಿಗೆ ಅವಕಾಶ ಸಿಗಲಿದೆ ಎನ್ನುವುದು ಕಾರ್ಮಿಕರ ಮಾತಾಗಿದೆ. ಅಲ್ಲದೆ ಮೂರು ವರ್ಷಗಳಿಂದ ನನೆಗುದ್ದಿಗೆ ಬಿದ್ದಿರುವ ಈ ಯೋಜನೆಗೆ ಶೀಘ್ರ ಚಾಲನೆ ದೊರೆತು ಜಿಲ್ಲೆಯ ಲಕ್ಷಾಂತರ ಕಾರ್ಮಿಕರ ಬೇಡಿಕೆಯ ಆಸ್ಪತ್ರೆಯ ನಿರ್ಮಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಚಿಕಿತ್ಸಾಲಯದಲ್ಲಿ ಸೌಲಭ್ಯಗಳೇ ಇಲ್ಲ

ಈಗಾಗಲೇ ಜಿಲ್ಲೆಯ ಉಡುಪಿ, ಮಣಿಪಾಲ, ಕುಂದಾಪುರ ಹಾಗೂ ಕಾರ್ಕಳದಲ್ಲಿ ಇಎಸ್‌ಐ ಚಿಕಿತ್ಸಾಲಯವಿದ್ದರೂ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಸೇವೆ ನೀಡಲು ಸರಿಯಾದ ಸಿಬ್ಬಂದಿ ವ್ಯವಸ್ಥೆಗಳಿಲ್ಲ. ಔಷಧ ಹಾಗೂ ದಾಖಲಾತಿಗಾಗಿ ಇರುವ ಕನಿಷ್ಠ ಸಿಬ್ಬಂದಿ ಇಲ್ಲಿನ ನಿರ್ವಹಣೆ ಮಾಡುವ ಹೊಣೆ ಹೊತ್ತುಕೊಂಡಿದ್ದಾರೆ.

ಮೂರು ವರ್ಷಗಳ ಹಿಂದೆ ಆಸ್ಪತ್ರೆ ಮಂಜೂರುಗೊಂಡಾಗ ಬಹುತೇಕ ಕಾರ್ಮಿಕ ಸಂಘಟನೆಗಳು ಹರ್ಷವನ್ನು ವ್ಯಕ್ತಪಡಿಸಿತ್ತು. ಆದರೆ ವರುಷ ಮೂರು ಕಳೆದರೂ ಕಟ್ಟಡ ಕಾಮಗಾರಿ ಮಾತ್ರ ಇನ್ನೂ ಆರಂಭಗೊಳ್ಳದೆ ಕಾರ್ಮಿಕರಿಗೆ ತೊಂದರೆಯಾಗಿದೆ. -ಚಂದ್ರ ಕುಮಾರ್, ಕಾರ್ಮಿಕ ಈಗಾಗಲೇ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜತೆ ಚರ್ಚಿಸಿದ್ದು, ಮುಂದಿನ 45 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಿಸಲಾಗುವುದು. ಹಿಂದಿನ ಗುತ್ತಿಗೆದಾರ ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದ ಕಾರಣ ಮರು ಟೆಂಡರ್ ಕರೆಯಲಾಗಿದೆ. -ಕೋಟ ಶ್ರೀನಿವಾಸ ಪೂಜಾರಿ ಸಂಸದ https://www.vijayavani.net/hebri-police-station-in-danger-2 https://www.vijayavani.net/first-place-in-the-division-in-the-speech-competition