ಹುಬ್ಬಳ್ಳಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು (ಹೆಸ್ಕಾಂ) ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್ ಸಿ) ಪ್ರಸ್ತಾವನೆ ಸಲ್ಲಿಸಿರುವುದಕ್ಕೆ ಕರ್ನಾಟಕ ವಾಣಿಜ್ಯ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ, ಕಾಂಗ್ರೆಸ್ ವಕ್ತಾರ ವಸಂತ ಲದವಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆಯೋಗವು 1999ರಲ್ಲಿ ಸ್ಥಾಪನೆಯಾದ ಶಾಸನಬದ್ಧ ಪ್ರಾಧಿಕಾರವಾಗಿದ್ದು, ರಾಷ್ಟ್ರೀಯ ವಿದ್ಯುತ್ ನೀತಿ, ವಿದ್ಯುತ್ ಕಾಯಿದೆ 2003 ಅಡಿ ಪ್ರಕಟಿಸಲಾಗಿದೆ. ಹೆಸ್ಕಾಂ ಸಲ್ಲಿಸಿದ ಪ್ರಸ್ತಾವನೆ ವಿವಿಧ ಸಂಘ-ಸಂಸ್ಥೆಗಳ ಅಹವಾಲುಗಳನ್ನು ಆಲಿಸಿ ದರ ಏರಿಕೆ ಪ್ರಸ್ತಾಪ ಕೂಲಂಕಷವಾಗಿ ಪರಿಶೀಲಿಸಿ ದರ ಏರಿಕೆ ಬಗ್ಗೆ ನಿರ್ಧಾರ ಮಾಡಲಿದೆ.
ಹೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳ ಅಸಮರ್ಪಕ ಆಡಳಿತ, ಹೊಣೆಗಾರಿಕೆಯ ಕೊರತೆ ಅಥವಾ ನಿರ್ಲಕ್ಷ್ಯ ಮತ್ತು ಅವ್ಯವಹಾರಗಳಿಂದ ನಷ್ಟವಾಗಿದ್ದರೆ ಆಯೋಗವು ದರ ಏರಿಕೆಗೆ ಸಮ್ಮತಿ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಬಳಕೆದಾರರ ಯಾವುದೇ ತಪ್ಪುಗಳಿಲ್ಲದಿದ್ದರೂ ಹೆಸ್ಕಾಂನ ದೋಷಪೂರಿತ ಆಡಳಿತದಿಂದ ನಷ್ಟ ಉಂಟಾದರೆ ಅದಕ್ಕೆ ಗ್ರಾಹಕರು ಏಕೆ ನಷ್ಟ ಭರಿಸಬೇಕು? ಇದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾದದ್ದು. ಅಧಿಕಾರಿಗಳ ತಪ್ಪಿನಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿರುವುದು ತನಿಖೆಗಳಿಂದ ಗೊತ್ತಾಗಿವೆ. ಇದರ ಬಗ್ಗೆ ಪರಿಶೀಲಿಸಿಬೇಕು ಎಂದು ಅವರು ವಿವರವಾದ ದಾಖಲೆಯೊಂದಿಗೆ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಸಮಗ್ರ ಪರಿಶೀಲನೆ ಮಾಡಿ ಯಾವುದೇ ಕಾರಣಕ್ಕೂ ದರ ಏರಿಕೆ ಮಾಡಬಾರದು ಎಂದು ಬಳಕೆದಾರರು, ರೈತರು ಹಾಗೂ ವಾಣಿಜ್ಯೋದ್ಯಮಿಗಳ ಪರವಾಗಿ ವಸಂತ ಲದವಾ ಮನವಿ ಮಾಡಿದ್ದಾರೆ.