ಜಿಲ್ಲೆ

2024ರಲ್ಲಿ ಭಾರತಕ್ಕಿಲ್ಲ ಗ್ರಹಣ! ವಿದೇಶಿಗರಿಗಷ್ಟೇ ವೀಕ್ಷಣೆಗೆ ಅವಕಾಶ

ರಮೇಶ್​ ಕುಮಾರ್​​ ಬಿ ಎಡಮೋಳೆ

ಉಡುಪಿ: ವರ್ಷದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಸೂರ್ಯ ಹಾಗೂ ಚಂದ್ರ ಗ್ರಹಣಗಳು ಸಂಭವಿಸುತ್ತವೆ. 2024ರಲ್ಲೂ ಮೂರು ಗ್ರಹಣಗಳು ಸಂಭವಿಸಲಿವೆ. ಆದರೆ, ಅವು ಭಾರತದಲ್ಲಿ ಗೋಚರಿಸುವುದಿಲ್ಲ. ಆ ಮೂರೂ ಗ್ರಹಣಗಳು ಅಮೆರಿಕ ಹಾಗೂ ಇನ್ನಿತರ ದೇಶಗಳಲ್ಲಿ ಮಾತ್ರ ಗೋಚರಿಸುತ್ತವೆ.

ಹೊಸ ವರ್ಷದಲ್ಲಿ ಅಪರೂಪದ ಎರಡು ಸೂರ್ಯಗ್ರಹಣ ಹಾಗೂ ಒಂದು ಚಂದ್ರ ಗ್ರಹಣ ಗೋಚರಿಸಲಿವೆ. ಏಪ್ರಿಲ್ 8ಕ್ಕೆ ಖಗ್ರಾಸ ಸೂರ್ಯ ಗ್ರಹಣ, ಅಕ್ಟೋಬರ್ 2ಕ್ಕೆ ಕಂಕಣ ಸೂರ್ಯಗ್ರಹಣ, ಸೆಪ್ಟೆಂಬರ್ 17ಕ್ಕೆ ಪಾರ್ಶ್ವ ಚಂದ್ರ ಗ್ರಹಣ ಇದ್ದು, ಅವೆಲ್ಲವೂ ಅಮೆರಿಕ ಹಾಗೂ ಆಸುಪಾಸು ದೇಶಗಳಲ್ಲಿ ಮಾತ್ರ ಗೋಚರಿಸಲಿವೆ.

ನಾಲ್ಕು ಸೂಪರ್ ಮೂನ್: ಹೊಸ ವರ್ಷದಲ್ಲಿ ಆಗಸ್ಟ್ 19, ಸೆಪ್ಟೆಂಬರ್ 18, ಅಕ್ಟೋಬರ್ 17 ಹಾಗೂ ನವೆಂಬರ್ 15ರಂದು ಸೂಪರ್ ಮೂನ್ ಕಂಡುಬರಲಿದೆ. 28 ದಿನಗಳಿಗೊಮ್ಮೆ ದೀರ್ಘ ವೃತ್ತಾಕಾರದಲ್ಲಿ ಭೂಮಿಯನ್ನು ಸುತ್ತುವ ಚಂದ್ರ ಒಮ್ಮೆ ಎಪೊಜಿ (ಸಮೀಪದ ದೂರ) ಬರುವುದಿದೆ. ಆದಿನ ಹುಣ್ಣಿಮೆಯಾದರೆ ಚಂದ್ರ ಮಾಮೂಲಿಗಿಂತ ಸುಮಾರು 14 ಅಂಶ ದೊಡ್ಡದಾಗಿ ಕಂಡುಬರುವುದಲ್ಲದೆ, 24 ಅಂಶ ಹುಣ್ಣಿಮೆಯ ಪ್ರಭೆ ಹೆಚ್ಚು ಇರಲಿದೆ. ಇದನ್ನೇ ಸೂಪರ್ ಮೂನ್ ಎನ್ನುತ್ತಾರೆ.

ಚಂದ್ರ ಹಾಗೂ ಭೂಮಿಯ ಸರಾಸರಿ ದೂರ ಸುಮಾರು 3,84,400 ಕಿಮೀ ಇದೆ. ಆದರೆ, ಈ ಸೂಪರ್ ಮೂನ್​ಗಳಲ್ಲಿ ಸುಮಾರು 3.56 ಸಾವಿರ ಕಿ.ಮೀ ಆಸುಪಾಸು ಬರುವುದಿದೆ. ಅಂದರೆ ಸುಮಾರು 28 ಸಾವಿರ ಕಿಮೀ ಭೂಮಿಗೆ ಚಂದ್ರ ಹತ್ತಿರ ಬರುತ್ತಾನೆ. ಆಗಸ್ಟ್ 19ರಂದು 3,61,970 ಕಿಮೀ, ಸೆಪ್ಟೆಂಬರ್ 18ರಂದು 3,57,486 ಕಿಮೀ, ಅಕ್ಟೋಬರ್ 17ರಂದು 3,57,364 ಕಿ.ಮೀ.ಹಾಗೂ ನವೆಂಬರ್ 15ರಂದು 3,61,867 ಕಿಮೀ ಭೂಮಿಯಿಂದ ದೂರದಲ್ಲಿ ಚಂದ್ರ ಗೋಚರಿಸಲಿದ್ದಾನೆ ಎಂದು ಉಡುಪಿಯ ಭೌತಶಾಸ್ತ್ರಜ್ಞ ಡಾ. ಎ.ಪಿ. ಭಟ್ ಮಾಹಿತಿ ನೀಡಿದ್ದಾರೆ.