ಜಿಲ್ಲೆ

ವೈದ್ಯರೂ ಇಲ್ಲ ಚಿಕಿತ್ಸೆಯೂ ಸಿಗಲ್ಲ

ಎನ್.ವೆಂಕಟೇಶ್

ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಹುತೇಕ ಹುದ್ದೆಗಳು ಖಾಲಿ ಖಾಲಿ ಕಾಡುತ್ತಿದೆ ಶುಶ್ರೂಷಕಿಯರ ಕೊರತೆ

ಬಾಗೇಪಲ್ಲಿ: ರೈತಾಪಿ ಕುಟುಂಬಗಳು, ಕೂಲಿ ಕಾರ್ಮಿಕರೇ ಹೆಚ್ಚು ವಾಸವಿರುವ ಗಡಿ ಭಾಗದ ಬಾಗೇಪಲ್ಲಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನೇ ದಿನೆ ವೈದ್ಯರ ಹುದ್ದೆಗಳು ಖಾಲಿಯಾಗುತ್ತಿದ್ದು, ಸಕಾಲಕ್ಕೆ ಸೂಕ್ತ ತಪಾಸಣೆ ಹಾಗೂ ಆರೋಗ್ಯ ಸೇವೆಗಳು ಸಿಗದೆ ಜನರು ಆರೋಗ್ಯ ಸೇವೆಗಳಿಗಾಗಿ ಪರದಾಡುವಂತಾಗಿದೆ.

ಬಾಗೇಪಲ್ಲಿ ತಾಲೂಕು ವ್ಯಾಪ್ತಿಯಲ್ಲಿ 41 ಸಾವಿರ ಬಿಪಿಎಲ್ ಕಾರ್ಡ್, ಎಪಿಎಲ್, ಅಂತ್ಯೋದಯ ಸೇರಿ 6 ಸಾವಿರ ಕುಟುಂಬಗಳಿದ್ದು, ಸುಮಾರು 2 ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ ಮೂಲಸೌಕರ್ಯ ಇಲ್ಲದ ಕಾರಣ ಶೇ.90 ರೋಗಿಗಳು ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಆಸಕ್ತಿ ತೋರುತ್ತಾರೆ. ಆದರೆ, ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಉಚಿತ ಚಿಕಿತ್ಸೆ ಬದಲಿಗೆ ವೈದ್ಯರ ಕೊರತೆ ಕಾಡುತ್ತಿದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದಂತಾಗಿದೆ. ಹಣ ಕೊಟ್ಟು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

51 ಹುದ್ದೆಗಳು ಖಾಲಿ

ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿ, ವೈದ್ಯರು, ಅಧಿಕಾರಿಗಳು ಸೇರಿ ಒಟ್ಟು 86 ಕಾಯಂ ಹುದ್ದೆಗಳಿದ್ದು, ಈ ಪೈಕಿ 35 ಹುದ್ದೆಗಳು ಭರ್ತಿಯಾಗಿವೆ. ಉಳಿದಂತಹ 51 ಹುದ್ದೆಗಳು ಖಾಲಿ ಉಳಿದುಕೊಂಡಿದ್ದು, ಹಾಲಿ ವೈದ್ಯರು ದಿನಕ್ಕೆ ಎರಡು ಪಾಳಿಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ, ಅರಿವಳಿಕೆ ತಜ್ಞರು, ಕೀಲು ಮತ್ತು ಮೂಳೆ ತಜ್ಞರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಹುದ್ದೆಗಳು ಖಾಲಿ ಇವೆ. ಅಂತೆಯೇ, 7 ಶುಶ್ರೂಷಾಧಿಕಾರಿಗಳು, ಟೆಕ್ನಾಲಿಸ್ಟ್, ಹಿರಿಯ ಫಾರ್ಮಸಿ ಅಧಿಕಾರಿ, 2 ಕಿರಿಯ ಫಾರ್ಮಸಿ ಅಧಿಕಾರಿ, 30 ಗ್ರೂಪ್ ಡಿ ನೌಕರರ ಹುದ್ದೆಗಳು ಖಾಲಿ ಇವೆ.

ಹೊರಗುತ್ತಿಗೆಗೆ ಮೊರೆ

ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ಹೊರಗುತ್ತಿಗೆ ನೌಕರರ ಹುದ್ದೆಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅನುಭವ ಇಲ್ಲದ, ವೈದ್ಯಕೀಯ ಸಂಸ್ಥೆಯಲ್ಲಿ ನಿಯಮಾನುಸಾರ ತರಬೇತಿ ಪಡೆಯದ ಹಲವರಿಗೆ ಸ್ಥಳೀಯ ನಾಯಕರ ಶಿಾರಸಿನಂತೆ ಹೊರಗುತ್ತಿಗೆ ನೌಕರರ ಹುದ್ದೆ ನೀಡಿರುವ ಆರೋಪವಿದೆ.

"ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ಕಾಯಂ ಹುದ್ದೆಗಳ ಭರ್ತಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಏಪ್ರಿಲ್, ಮೇನಲ್ಲಿ ನಡೆಯುವ ಕೌನ್ಸೆಲಿಂಗ್‌ನಲ್ಲಿ ಭರ್ತಿ ಮಾಡುವ ಕೆಲಸ ಸರ್ಕಾರದಿಂದಾಗಬೇಕಿದೆ. ಕೌನ್ಸೆಲಿಂಗ್ ವೇಳೆಯಲ್ಲಿ ಬಾಗೇಪಲ್ಲಿ ತಾಲೂಕಿಗೆ ವೈದ್ಯರು ಬರಲು ಹಿಂದೇಟು ಹಾಕುತ್ತಿದ್ದಾರೆ. ಹೊರಗುತ್ತಿಗೆ ನೌಕರರ ಹುದ್ದೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ಖಾಲಿ ಇರುವ ಕಾಯಂ ವೈದ್ಯ ಹಾಗೂ ಸಿಬ್ಬಂದಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು." - ಡಾ.ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ, ಚಿಕ್ಕಬಳ್ಳಾಪುರ. "ಬಾಗೇಪಲ್ಲಿ ತಾಲೂಕು ಕೃಷಿ ಮತ್ತು ಹೈನುಗಾರಿಕೆ ಅಲವಂಬಿತ ಪ್ರದೇಶವಾಗಿದೆ. ರೈತರು, ಕೂಲಿ ಕಾರ್ಮಿಕರು ಹೆಚ್ಚು ವಾಸ ಇದ್ದಾರೆ. ಬಾಗೇಪಲ್ಲಿ ತಾಲೂಕು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದೆ. ಈ ಭಾಗದ ಜನರ ಆರೋಗ್ಯದಲ್ಲಿ ಸಮಸ್ಯೆ ಎದುರಾದಾಗ ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಇಂತಹ ತಾಲೂಕು ಕೇಂದ್ರದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರು ಇಲ್ಲದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು ಗಮನಹರಿಸಿ ಖಾಲಿ ಇರುವ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಿದೆ." - ವೆಂಕಟೇಶ್, ರಾಜ್ಯ ಅಧ್ಯಕ್ಷರು, ರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್, ಬಾಗೇಪಲ್ಲಿ