ಶಿಗ್ಲಿ : ಗ್ರಾಮದಲ್ಲಿ ಒಂದು ಸರ್ಕಾರಿ ಪಿಯು ಕಾಲೇಜ್, ಎರಡು ಅನುದಾನಿತ, ಒಂದು ಖಾಸಗಿ ಪ್ರೌಢಶಾಲೆ ಬಿಟ್ಟರೆ ಉನ್ನತ ಶಿಕ್ಷಣಕ್ಕೆ ಆಸಯಾಗಬಲ್ಲ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪಿಯು ಬಳಿಕ ಲಕ್ಷ್ಮೇಶ್ವರ, ಗದಗ, ಮುಳಗುಂದ ಪಟ್ಟಣಗಳಿಗೆ ಹೋಗುವುದು ಅನಿವಾರ್ಯವಾಗಿದೆ.
ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ಅದೆಷ್ಟೋ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಸಗಿ ಉದ್ವೋಗ ಕ್ಷೇತ್ರಗಳಲ್ಲಿ, ಐಟಿ-ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಪ್ರಸ್ತುತ ಪರಮೇಶಪ್ಪ ಮ. ಬಳಿಗಾರ ಸರ್ಕಾರಿ ಪದವಿಪೂರ್ವ ವಿದ್ಯಾಲಯವಿದ್ದು, ಪ್ರತಿವರ್ಷ 300 ರಿಂದ 350 ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣ ಪಡೆದು ಮುಂದಿನ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೂರದ ಉರುಗಳಿಗೆ ತೆರಳಬೇಕಿದೆ. ಆರ್ಥಿಕವಾಗಿ ಹಿಂದುಳಿದವರು ಪದವಿ ಶಿಕ್ಷಣದ ಕನಸಿಗೆ ಎಳ್ಳು-ನೀರು ಬಿಟ್ಟು, ಕೂಲಿ ಅರಸಿ ಗ್ರಾಮವನ್ನೇ ತೊರೆದು ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ.
ಶಿಗ್ಲಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಜನರೇ ಅಧಿಕವಾಗಿದ್ದಾರೆ. ಬಹುತೇಕರು ಕೃಷಿ ಹಾಗೂ ನೇಕಾರಿಕೆ ಅವಲಂಬಿಸಿದ್ದಾರೆ. ದೂರದ ಉರುಗಳಿಗೆ ಹೋಗಿ ಪದವಿ ಶಿಕ್ಷಣ ಪಡೆಯಲು ಪ್ರವೇಶ ಶುಲ್ಕ, ವಸತಿ, ಊಟ, ಪಠ್ಯ, ಪುಸ್ತಕ ಖರೀದಿ ಸೇರಿ ವರ್ಷಕ್ಕೆ 1 ಲಕ್ಷ ರೂಪಾಯಿಯಿಂದ 1.5 ಲಕ್ಷ ರೂ ವರೆಗೆ ಖರ್ಚು ಮಾಡುವಷ್ಟು ಶಕ್ತರಾಗಿಲ್ಲ. ಹೀಗಾಗಿ ಪದವಿ ಶಿಕ್ಷಣ ಪಡೆಯಲಾಗದ ಸ್ಥಿತಿ ಅನೇಕ ಕುಟುಂಬಗಳಲ್ಲಿದೆ. ಶಿಕ್ಷಣ ಮೊಟಕುಗೊಳಿಸಿದ ಮಕ್ಕಳ ತಂದೆ- ತಾಯಂದಿರು ಮನದಲ್ಲೇ ನೋವು ಅನುಭವಿಸುತ್ತಿದ್ದಾರೆ.
ಗ್ರಾಮಕ್ಕೆ ಸರ್ಕಾರಿ ಪಾಲಿಟೆಕ್ನಿಕ್, ಐಟಿಐ ಹಾಗೂ ಪದವಿ ಕಾಲೇಜ್ ನೀಡಬೇಕು ಎಂಬ ಕೂಗು ಬಹಳ ವರ್ಷಗಳಿಂದ ಇದೆ. ಈ ಕುರಿತು ಅನೇಕ ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಸರ್ಕಾರ ಬದಲಾಗಿದೆ. ಇನ್ನಾದರೂ ಗ್ರಾಮದಲ್ಲಿನ ಶೈಕ್ಷಣಿಕ ವ್ಯವಸ್ಥೆ ಬಲಪಡಿಸಬೇಕು ಎಂದು ಆಗ್ರಹಿಸುತ್ತಾರೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಗ್ರಾಪಂ ಉಪಾಧ್ಯಕ್ಷ ಶಿವಣ್ಣ ಕುರಿ.
ಶಿಗ್ಲಿಗೆ ಸರ್ಕಾರಿ ಪದವಿ ವಿದ್ಯಾಲಯ ಕಿರೀಟದಂತಿದೆ. ಪದವಿ ಕಾಲೇಜ್ ಪ್ರಾರಂಭಿಸುವ ಬಗ್ಗೆ ಶಿಗ್ಲಿ ಹಾಗೂ ಸುತ್ತಲಿನ ಗ್ರಾಮಗಳ ಮುಖಂಡರ, ಗ್ರಾಮಸ್ಥರನ್ನು ವಿಶ್ವಾಸ ತೆಗೆದುಕೊಳ್ಳುವೆ. ಪದವಿ ಕಾಲೇಜ್ ಮಂಜೂರಾತಿ ಪಡೆಯಲು ಪ್ರಯತ್ನಿಸುತ್ತೇನೆ.-ಡಾ. ಚಂದ್ರು ಲಮಾಣಿ, ಶಾಸಕ