ಬೆಳಗಾವಿ: ಸಮಾಜ ಬದಲಾಗಬೇಕಾದರೆ ಮೊದಲು ನಾವು ಬದಲಾಗಬೇಕೆಂಬ ಭಾವನೆ ನಮ್ಮಲ್ಲಿ ಬರಬೇಕು. ಆಗ ಮಾತ್ರ ಸುಧಾರಣೆ ಬರಲು ಸಾಧ್ಯ ಎಂದು ನಂದಗಡ ಪಿಯು ಕಾಲೇಜ್ ಪ್ರಾಚಾರ್ಯ ಎಂ.ಕೆ.ಭಜಂತ್ರಿ ಹೇಳಿದರು.
ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನುಲಿ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಚನಕಾರ ಬಸವಣ್ಣನ ಮಾತನ್ನು ಚಾಚು ತಪ್ಪದೆ ಪಾಲಿಸಿ ನಡೆದ ನುಲಿ ಚಂದಯ್ಯ ಸಮಾಜ ಸುಧಾರಣೆಗಾಗಿ ದುಡಿದವರು. ಅನುಭವದ ಮುಂದೆ ಯಾವ ಪದವಿಯೂ ದೊಡ್ಡದಲ್ಲ ಎಂಬ ಚಂದಯ್ಯನ ಸಂದೇಶ ಯುವ ಪೀಳಿಗೆಗಳಿಗೆ ಜೀವನ ಪಾಠವಿದ್ದಂತೆ ಎಂದರು.
ನಾವು ಬದುಕುವ, ನಡೆದುಕೊಳ್ಳುವ ರೀತಿಯನ್ನು ನಮ್ಮ ಮಕ್ಕಳು ಅನುಕರಣೆ ಮಾಡುತ್ತಾರೆ. ಹೀಗಾಗಿ ಮಾದರಿಯಾಗಿ ಇರಬೇಕು. ಸಮಾಜದಲ್ಲಿ ಯಾವ ರೀತಿಯಾಗಿ ಮಾದರಿಯಾಗಬೇಕು ಎಂಬುವುದನ್ನು ಶರಣರ ಜೀವನ ನೋಡಿ ಕಲಿತುಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಡಾ. ವೈ.ಎಂ. ಯಾಕೊಳ್ಳಿ, ನುಲಿ ಚಂದಯ್ಯನ ಜೀವನ ಸಾಧನೆಗಳ ಕುರಿತು ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಶಂಕರ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಬಸಪ್ಪ ಭಜಂತ್ರಿ ಇತರರಿದ್ದರು. ಕಾರ್ಯಕ್ರಮಕ್ಕೂ ಮುಂಚೆ ಕನ್ನಡ ಸಾಹಿತ್ಯ ಭವನದ ಆವರಣದಿಂದ ಆರಂಭಗೊಂಡ ಭಾವಚಿತ್ರದ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ಕಲಾಮಂದಿರದವರೆಗೆ ನಡೆಯಿತು.