ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ ತಾಲೂಕಿನ ಚತುಷ್ಪಥ ಹೆದ್ದಾರಿ ಸೇತುವೆ, ನದಿಗಳು, ಹೆದ್ದಾರಿ ಮತ್ತು ಗ್ರಾಮಾಂತರ ರಸ್ತೆ, ಅರಣ್ಯದಂಚು, ಚರಂಡಿ ಕೊಳಚೆ ಗಟಾರಾಗಿ ಮಾರ್ಪಟ್ಟಿದೆ. ಕಳೆದೊಂದು ತಿಂಗಳಿಂದ ಕೊಳಚೆ ರಾಶಿ ಬೀಳುತ್ತಿರುವ ಬಗ್ಗೆ ಪರಿಸರ ಪ್ರಿಯರು ಕಳವಳ ವ್ಯಕ್ತಪಡಿಸಿದ್ದಾರೆ.
ಕುಂದಾಪುರ ತಾಲೂಕಿನ ಏಳಕ್ಕೂ ಮಿಕ್ಕಿ ರಾಷ್ಟ್ರೀಯ ಹೆದ್ದಾರಿ ಸೇತುವೆಗಳ ಸಂಧಿಗಳು ತ್ಯಾಜ್ಯ ಗುಂಡಿಗಳಾಗಿ ಮಾರ್ಪಾಡಾಗುತ್ತಿದೆ. ಶಿರೂರು ಸಂಕದಗುಂಡಿ ಸೇತುವೆ ಮೊದಲ್ಗೊಂಡು ಕುಂದಾಪುರ ಸಂಗಮ್ ಸೇತುವೆವರೆಗಿನ ಇಕ್ಕೆಲ ತ್ಯಾಜ್ಯ ಎಸೆಯುವಿಕೆ ಕೇಂದ್ರವಾಗಿದೆ. ತಲ್ಲೂರು ಗ್ರಾಮದ ರಾಜಾಡಿ ಸೇತುವೆ ಇಕ್ಕೆಲ ದುರ್ನಾತ ಬೀರುತ್ತಿದೆ. ಸೇತುವೆಯಲ್ಲಿ ನಿಂತು ತ್ಯಾಜ್ಯ ಎಸೆಯುವ ನೋಟ ಮಾಮೂಲಾಗಿ ಬಿಟ್ಟಿದೆ.
ಗ್ರಾಮಾಂತರ ಸೇತುವೆಗಳಲ್ಲೂ ಇದೇ ಅವಸ್ಥೆ. ಆನಗಳ್ಳಿ, ಕಂಡ್ಲೂರು, ಅಂಪಾರು, ವಂಡ್ಸೆ, ನೇರಳಕಟ್ಟೆ ಸಮೀಪದ ಸೇತುವೆ ಬುಡದಲ್ಲಿ ಲೋಡುಗಟ್ಟಲೆ ತ್ಯಾಜ್ಯ ತುಂಬಿದೆ. ಅರಣ್ಯದಂಚಿನಲ್ಲಿ ಸಾಗುವ ಹೆದ್ದಾರಿ ಬದಿ, ರಸ್ತೆಬದಿ ತ್ಯಾಜ್ಯದ ಮೂಟೆಗಳು ಕಣ್ಣಿಗೆ ರಾಚುತ್ತಿದೆ. ಕುಂದಾಪುರದಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿ-66 ಮತ್ತು ನಾಯಕವಾಡಿ-ಮುಳ್ಳಿಕಟ್ಟೆ, ತ್ರಾಸಿ-ಗಂಗೊಳ್ಳಿ, ಹೆಮ್ಮಾಡಿ-ಕೊಲ್ಲೂರು, ಆಲೂರು-ವಂಡ್ಸೆ ಮೊದಲಾದ ಪ್ರಮುಖ ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಪ್ರತಿನಿತ್ಯ ಎಂಬಂತೆ ತ್ಯಾಜ್ಯಗಳ ಮೂಟೆಗಳು ಬಂದು ಬೀಳುತ್ತಿದೆ.
ಎಲ್ಲೆಂದರಲ್ಲಿ ತ್ಯಾಜ್ಯ ಸಹನೆಯ ಮಟ್ಟ ಮೀರಿ ಸಂಗ್ರಹವಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳ ಇಕ್ಕೆಲಗಳಲ್ಲಿ, ಸೇತುವೆ, ಕಾಡಂಚಿನ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವಿಕೆಗೆ ನಿಯಂತ್ರಣ ಇಲ್ಲ ಎಂಬಂತಾಗಿದೆ. ಕಸ ಎಸೆಯದಂತೆ ಅಳವಡಿಸುವ ನಾಮಫಲಕಗಳಿಗೆ ಯಾವುದೇ ಕಿಮ್ಮತ್ತಿಲ್ಲದಂತಾಗಿದೆ. ನಾಮಫಲಕದ ಬುಡದಲ್ಲೇ ಕಸ ಎಸೆದುಹೋಗುತ್ತಿದ್ದು, ಸ್ವಚ್ಛ ಭಾರತ್ ಪರಿಕಲ್ಪನೆಯಡಿ ಪ್ರತಿ ಗ್ರಾಮದಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ಕಾರ್ಯಾಚರಿಸುತ್ತಿದ್ದರೂ ಬೀದಿ ಬೀದಿಯಲ್ಲಿನ ತ್ಯಾಜ್ಯ ಎಸೆಯುವಿಕೆಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಜಿಲ್ಲಾಡಳಿತ ಹೆದ್ದಾರಿ ಬದಿ ಕಸ ಎಸೆಯುವುದನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಚರಂಡಿ, ಹೆದ್ದಾರಿ ಬದಿ, ಅರಣ್ಯದಂಚಿನ ಪ್ರದೇಶಗಳು, ಸೇತುವೆ ಸಮೀಪದಲ್ಲಿ ನಿಯಂತ್ರಣ ಮೀರಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಅಸಹನೀಯ ತ್ಯಾಜ್ಯ ಸಾಂಕ್ರಾಮಿಕ ರೋಗ ಭೀತಿಗೆ ಕಾರಣವಾಗಬಲ್ಲದು. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವಿಕೆ ತಡೆಯಲು ಪರಿಹಾರ ಮಾರ್ಗ ಕಂಡುಕೊಳ್ಳುವುದು ಅತ್ಯವಶ್ಯ. ಜಿಲ್ಲಾಡಳಿತ ಹೆದ್ದಾರಿ ಬದಿ ಕಸ ಎಸೆಯುವುದನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು. -ನವೀನ್ ಗಂಗೊಳ್ಳಿ ಸಾಮಾಜಿಕ ಕಾರ್ಯಕರ್ತ ಮನೆ ಮನೆ ಕಸ ವಿಲೇವಾರಿಗೆ ನಾಗರಿಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಆದರೂ ಚರಂಡಿ, ಹೆದ್ದಾರಿ ಬದಿ, ಸೇತುವೆ ಬುಡ ಹಾಗೂ ನಿರ್ಜನ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುತ್ತಿರುವುದು ಹೆಚ್ಚಾಗುತ್ತಿದೆ. ಅಲ್ಲಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ, ನಾಮಫಲಕ ಹಾಕಲಾಗಿದ್ದರೂ ಕಸ ಎಸೆಯುವಿಕೆ ಮುಂದುವರಿದಿದೆ. ಇದನ್ನು ತಡೆಯಲು ಪರಿಣಾಮಕಾರಿ ಪರಿಹಾರ ಮಾರ್ಗ ಕಂಡುಕೊಳ್ಳುವುದು ಅತ್ಯವಶ್ಯ. -ಶೋಭಾ ಎಚ್. ಪಿಡಿಒ ಗಂಗೊಳ್ಳಿ https://www.vijayavani.net/bridge-dream-revived https://www.vijayavani.net/diabetes-awareness-among-the-public