ಜಿಲ್ಲೆ

ನರೇಗಾದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ

ಲಲಾಟಾಕ್ಷ ಎಸ್

ಯಳಂದೂರು: ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯಾವುದೇ ಅವ್ಯವಹಾರ ನಡೆದಿಲ್ಲ. ಕೆಲವರು ಈ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಅಭಿವೃದ್ಧಿ ಅಧಿಕಾರಿ ಕಾವ್ಯಾ ಸ್ಪಷ್ಟನೆ ನೀಡಿದ್ದಾರೆ.


ಭಾನುವಾರ ನರೇಗಾ ಯೋಜನೆಯಡಿ ನಂಜಪ್ಪ ಅವರ ಜಮೀನಿನ ಬಳಿಯ ಕೆರೆ ಅಭಿವೃದ್ಧಿ ಕಾಮಗಾರಿ ಮಾಡಿಸುವ ವಿಚಾರವಾಗಿ ಇಲ್ಲಿ ಕೂಲಿಯಾಳುಗಳು ಇರಲಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಭಾನುವಾರ ಅಂಬಳೆ ಗ್ರಾಮದಲ್ಲಿ ಕೊಂಡೋತ್ಸವ ಇತ್ತು. ಆ ದಿನ ಕಾಮಗಾರಿ ಬೇಡ ಎಂದು ಹೇಳಿದ್ದೆ. ಭಾನುವಾರ ಆಗಿರುವುದರಿಂದ ಈ ಕೆಲಸ ಮಾಡಬಾರದು ಎಂದು ನಾನು ಸೂಚನೆ ನೀಡಿದ್ದೆ. ಆದರೆ ಕೂಲಿಯಾಳುಗಳು ಬಂದು ಒಂದು ಗಂಟೆ ಕೆಲಸ ಮಾಡಿದ್ದಾರೆ. ಆದರೆ ಇವರು ಹಬ್ಬವೆಂದು ಮತ್ತೆ ವಾಪಸಾಗಿದ್ದಾರೆ. ಹಾಗಾಗಿ ಆ ದಿನದಲ್ಲಿ ಅವರು ಗೈರು ಹಾಜರಾಗಿದ್ದಾರೆ ಎಂದು ನಮೂಸಿದ್ದೇನೆ. ಹಾಗಾಗಿ ಯಾವುದೇ ಲೋಪವಾಗಿಲ್ಲ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.


ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಭಾನುವಾರ ಕೆಲಸ ಮಾಡಬಾರದು ಎಂದು ನಾವು ಸೂಚನೆ ನೀಡಿದ್ದೆವು. ಆದರೂ ಕೆಲವು ಕೂಲಿ ಕಾರ್ಮಿಕರು ಬಂದಿದ್ದರು. ಅಷ್ಟರಲ್ಲೇ ಜಿಪಿಎಸ್ ಮಾಡುವರು ಫೋಟೋ ತೆಗೆದಿದ್ದಾರೆ. ನಂತರ ಕೆಲಸ ಬೇಡ ಎಂದು ವಾಪಸ್ ಕಳುಹಿಸಲಾಗಿದೆ. ಇಲ್ಲಿ ಯಾವುದೆ ಲೋಪವಾಗಿಲ್ಲ. ಆ ದಿನ ಗೈರು ಹಾಜರಿಯನ್ನು ಹಾಕುವಂತೆ ಸೂಚನೆ ನೀಡಲಾಗಿದೆ. ಪಿಡಿಒ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ತಿಳಿಸಿದರು.