ಮಂಗಳೂರು: ದುಬೈಯಿಂದ ಆಗಮಿಸಿದ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆರೋಗ್ಯ ಇಲಾಖೆ ನಿಭಾಯಿಸಿದ ರೀತಿ ಮತ್ತು ಈ ಸಂದರ್ಭದ ಬೆಳವಣಿಗೆಗಳು ಕರೊನಾ ಸೋಂಕು ಹರಡದಂತೆ ತಡೆಯುವಲ್ಲಿ ಸೂಕ್ತ ಸಿದ್ಧತೆಯನ್ನು ಜಿಲ್ಲಾಡಳಿತ ಮತ್ತು ಜಿಲ್ಲಾಸ್ಪತ್ರೆ ವೆನ್ಲಾಕ್ ನಡೆಸಿಲ್ಲವೆಂಬುದನ್ನು ಸಾಕ್ಷೀಕರಿಸಿವೆ.
ಹಲವು ಜಿಲ್ಲೆಗಳು ನಂಬಿಕೊಂಡಿರುವ ವೆನ್ಲಾಕ್ ಆಸ್ಪತ್ರೆ ವ್ಯವಸ್ಥೆಯ ನಡುವೆಯೇ ಕರೊನಾ ರೋಗಿಗಳಿಗೆಂದು ಪ್ರತ್ಯೇಕ ೧೦ ಬೆಡ್‌ಗಳ ವಾರ್ಡನ್ನು ಸಿದ್ಧಪಡಿಸಲಾಗಿದೆ. ಆದರೆ ಅಪಾಯಕಾರಿಯಾಗಿರುವ ಕರೊನಾ ಸೋಂಕು ಇತರರಿಗೆ ಹರಡದಂತೆ ತಡೆಯುವ ಸಿದ್ಧತೆ ಈ ವಾರ್ಡಿನಲ್ಲಿ ಕಾಣಿಸುತ್ತಿಲ್ಲ. ವೈದ್ಯಾಧಿಕಾರಿಗಳ ನಡುವಿನ ಕಿತ್ತಾಟ, ಗೊಂದಲಗಳು ಪೂರ್ವತಯಾರಿಯ ಸೂಚನೆ ಒದಗಿಸುತ್ತಿಲ್ಲ. ಇನ್ನು ಶಂಕಿತ ರೋಗಿ ತಪ್ಪಿಸಿಕೊಂಡಿರುವುದಲ್ಲ, ಆಸ್ಪತ್ರೆಯವರೇ ಕಳುಹಿಸಿಕೊಟ್ಟಿದ್ದಾರೆ ಎಂಬುದೂ ‘ವಿಜಯವಾಣಿ’ಗೆ ಖಚಿತ ಮಾಹಿತಿ ಲಭಿಸಿದೆ.
ಏನಿದು ಘಟನೆ?: ಭಾನುವಾರ ಸಾಯಂಕಾಲ ದುಬೈಯಿಂದ ಬಂದಿಳಿದ ವಿಮಾನದಲ್ಲಿದ್ದ ತಲಪಾಡಿ ಕೆ.ಸಿ.ನಗರ ನಿವಾಸಿ ಯುವಕನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಅವರಿಗೆ ಜ್ವರ ಇರುವುದು ಕಂಡುಬಂದಿದ್ದರಿಂದ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲು ನಿರ್ಧರಿಸಲಾಯಿತು.
ಆ ಬಳಿಕದ ಇಡೀ ಘಟನೆ ನಾಟಕೀಯವಾಗಿ ನಡೆಯಿತು. ವಿಮಾನ ನಿಲ್ದಾಣದಲ್ಲಿ ಇದ್ದ ಯುವಕನನ್ನು ಆಸ್ಪತ್ರೆಗೆ ಕರೆತರಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವುದೇ ಬಹಳ ಸಮಯವಾಯಿತು. ಆಂಬುಲೆನ್ಸ್ ವಿಮಾನ ನಿಲ್ದಾಣದಿಂದ ಕೊಡುವುದೇ ಅಥವಾ ವೆನ್ಲಾಕ್ ಆಸ್ಪತ್ರೆಯಿಂದ ಕಳುಹಿಸಬೇಕೇ ಎಂಬ ಕುರಿತು ಕಾಲಹರಣ ನಡೆಯಿತು. ಹಾಗೂ ಹೀಗೂ ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆ ಮುಖ್ಯಸ್ಥರೇ ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆಸಿಲ್ಲವೆಂಬುದು ಖಚಿತಗೊಂಡಿತು. ರೋಗಿಯನ್ನು ಏನು ಮಾಡಬೇಕೆಂದು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಆಸ್ಪತ್ರೆ ಅಧೀಕ್ಷಕಿ ನಡುವೆ ವಾಗ್ವಾದ ನಡೆದು ದೂರು ಜಿಲ್ಲಾಧಿಕಾರಿಗೆ ತಲುಪಿದೆ.
ಯುವಕ ಕಂಗಾಲು: ಇಷ್ಟು ಹೊತ್ತಿಗೆ ವಿದೇಶದಿಂದ ಆಗಮಿಸಿದ್ದ ಜ್ವರ ಬಾಧಿತ ಯುವಕ ಕಂಗಾಲಾಗಿದ್ದಾರೆ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯ ಮೈಕ್ರೋ ಬಯೋಲಾಜಿಸ್ಟ್ ಹಾಗೂ ಇತರ ಸಿಬ್ಬಂದಿ ಕೂಡ ಆಗಮಿಸಿದ್ದಾರೆ. ನಾನು ಖಾಸಗಿ ಆಸ್ಪತ್ರೆಯಲ್ಲೇ ದಾಖಲಾಗಿ ಚಿಕಿತ್ಸೆ ಪಡೆಯುವುದಾಗಿ ರೋಗಿ ವೆನ್ಲಾಕ್ ವೈದ್ಯಾಧಿಕಾರಿಗಳಿಗೆ ತಿಳಿಸಿದಾಗ, ಅದನ್ನು ಲಿಖಿತವಾಗಿ ಬರೆದುಕೊಡುವಂತೆ ವೈದ್ಯರು ತಿಳಿಸಿದ್ದಾರೆ. ಯುವಕನೇ ಬರೆದು ರುಜು ಹಾಕಿ ಕೊಟ್ಟಿದ್ದಾರೆ. ಇದೇ ಆಧಾರ ಇಟ್ಟುಕೊಂಡು ವೈದ್ಯರು ಯುವಕನನ್ನು ಕಳುಹಿಸಿಕೊಟ್ಟಿದ್ದಾರೆ.
ಈ ನಡುವೆ, ಯುವಕ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಎಚ್ಚೆತ್ತುಕೊಂಡು ಪಾಂಡೇಶ್ವರ ಪೊಲೀಸರಿಗೆ ದೂರವಾಣಿ ಮೂಲಕ ‘ಆಸ್ಪತ್ರೆಗೆ ಕರೊನಾ ಶಂಕೆ ದೃಢಪಡಿಸಲು ಕರೆತಂದ ಯುವಕ ತಪ್ಪಿಸಿಕೊಂಡಿದ್ದಾನೆ’ ಎಂದು ದೂರು ನೀಡಿದ್ದಾರೆ.
ಪತ್ನಿ ಮನೆಯಲ್ಲಿ ಪತ್ತೆ, ಬಂಟ್ವಾಳ ಆಸ್ಪತ್ರೆಗೆ ದಾಖಲು:
ವಿಟ್ಲ: ವೆನ್ಲಾಕ್ ಆಸ್ಪತ್ರೆಯಿಂದ ಕಣ್ಮರೆಯಾದ ಕರೊನಾ ಶಂಕಿತ ಜ್ವರ ಬಾಧಿತ ಯುವಕ ವಿಟ್ಲದ ಪಳಿಕೆ ಸಮೀಪದ ರಂಗರಮಜಲು ಎಂಬಲ್ಲಿನ ತನ್ನ ಪತ್ನಿಯ ಮನೆಯಲ್ಲಿರುವುದನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದ್ದು, ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಸ್ಥಳೀಯರ ಮಾಹಿತಿಯಂತೆ ಸ್ಥಳಕ್ಕೆ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ಎಸ್.ಕೆ. ತೆರಳಿ, ಯುವಕನಿಗೆ ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡಿ ಸಿಬ್ಬಂದಿ ಹೇಮಾ ಅವರನ್ನು ನಿಯೋಜಿಸಿದರು.
ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್. ಆರ್, ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು ಭೇಟಿ ನೀಡಿ ಯುವಕನ ಜತೆ ಮಾತುಕತೆ ನಡೆಸಿದರು. ವೆನ್ಲಾಕ್ ಆಸ್ಪತ್ರೆಗೆ ಹೋಗಲು ನಿರಾಕರಿಸಿದ ರೋಗಿ ಮತ್ತು ಮನೆಯವರು, ಖಾಸಗಿ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿದರು. ಕೇಂದ್ರ ಸರ್ಕಾರದ ಆದೇಶದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ನುರಿತ ತಜ್ಞ ವೈದ್ಯರು ಇದ್ದು, ಸೂಕ್ತ ಚಿಕಿತ್ಸೆ ನೀಡುತ್ತಾರೆ ಎಂಬ ಆರೋಗ್ಯ ಇಲಾಖೆ ಅಧಿಕಾರಿಗಳ ಭರವಸೆ ಬಳಿಕ ಬಂಟ್ವಾಳ ಆಸ್ಪತ್ರೆಗೆ ಹೋಗಲು ಒಪ್ಪಿದರು.
ಬಳಿಕ ಬಂಟ್ವಾಳ ತಾಲೂಕು ಆಸ್ಪತ್ರೆಯ ಐಸೋಲೇಶನ್ ವಾರ್ಡಿಗೆ ದಾಖಲಿಸಿ, ವಿವಿಧ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಎರಡು ದಿನದಲ್ಲಿ ವರದಿ ಬರಲಿದೆ ಎಂದು ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು ವಿಜಯವಾಣಿಗೆ ತಿಳಿಸಿದ್ದಾರೆ.
ಕಂದಾಯ ಇಲಾಖೆಯ ಪ್ರಭಾರ ಕಂದಾಯ ನಿರೀಕ್ಷಕ ರಾಮ ಕೆ., ಗ್ರಾಮಕರಣಿಕರಾದ ಮಂಜುನಾಥ ಕೆ.ಎಚ್., ಗ್ರಾಮ ಸಹಾಯಕರಾದ ಗಿರೀಶ್, ಲಿಂಗಪ್ಪ ಗೌಡ, ಗಣೇಶ್ ಪ್ರಭು, ಆರೋಗ್ಯ ಇಲಾಖೆ ಸಿಬ್ಬಂದಿ ಸುಜಾತ, ಜೀವನ್, ಪ್ರಶಾಂತ್, ದೀಪಾ, ಗೀತಾ, ಉಮಾ, ವೀರಮ್ಮ ಮತ್ತಿತ್ತರರು ವಿಟ್ಲದಲ್ಲಿ ಹಾಜರಿದ್ದರು.
ಇದೇ ಮೊದಲಲ್ಲ: ಶನಿವಾರ ವಿದೇಶದಿಂದ ಆಗಮಿಸಿದ್ದವರೊಬ್ಬರಲ್ಲಿ ಲಕ್ಷಣಗಳನ್ನು ಆಧರಿಸಿ ಕರೊನಾ ಶಂಕೆಯಿಂದ ತಪಾಸಣೆಗೆ ಕರೆತಂದ ರೋಗಿಯನ್ನು ಕೂಡ ತಪಾಸಣೆ ನಡೆಸದೆ ವೆನ್ಲಾಕ್ ಆಸ್ಪತ್ರೆ ಅಧಿಕಾರಿಗಳು ಬಿಟ್ಟುಕೊಟ್ಟಿದ್ದರು ಎನ್ನುವ ಆರೋಪವೂ ಕೇಳಿಬಂದಿದೆ.
ಪ್ರತ್ಯೇಕ ವಾರ್ಡ್ ಪ್ರತ್ಯೇಕವಿಲ್ಲ!: ಶಂಕಿತ ಕರೊನಾ ರೋಗಿಗಳಿಗಾಗಿ ವೆನ್ಲಾಕ್‌ನಲ್ಲಿ ಮೀಸಲಿರಿಸಿದ್ದ ಪ್ರತ್ಯೇಕ ವಾರ್ಡ್ ಇತರ ಜನರಲ್ ವಾರ್ಡ್‌ಗಳ ನಡುವೆಯೇ ಇದೆ. ಸಾಮಾನ್ಯ ಕೊಠಡಿಯೊಂದರ ಬಾಗಿಲಿಗೆ ಅಂಟಿಸಿದ ಭಿತ್ತಿಪತ್ರದಿಂದಷ್ಟೇ ಅದು ಪ್ರತ್ಯೇಕ ವಾರ್ಡ್ ಎಂದು ತಿಳಿಯಬೇಕು. ಜನರಲ್ ವಾರ್ಡ್ ಸಮೀಪದಲ್ಲೇ ಪ್ರತ್ಯೇಕ ವಾರ್ಡ್ ಇರುವುದರಿಂದ ಕರೊನಾದಂಥ ಸೋಂಕನ್ನು ತಡೆಯುವುದು ಕಷ್ಟ ಎಂದು ತಜ್ಞ ವೈದ್ಯರೇ ಹೇಳುತ್ತಾರೆ.
ವಾರ್ಡ್ ಒಳಗೆ ರೋಗಿಗೆ ಚಿಕಿತ್ಸೆ ಒದಗಿಸುವ ವೈದ್ಯರು ಧರಿಸುವ ಪೂರ್ಣ ದೇಹವನ್ನು ಆವರಿಸಿಕೊಳ್ಳುವ ಸ್ವಯಂರಕ್ಷಣಾ ಕವಚ (ಪರ್ಸನಲ್ ಪ್ರೊಟೆಕ್ಷನ್ ಇಕ್ವೆಪ್‌ಮೆಂಟ್- ಪಿಪಿಇ), ರೋಗಿ ಧರಿಸುವ ಕವಚ, ವಿಶೇಷ ಮಾಸ್ಕ್‌ಗಳು ವಾರ್ಡ್‌ನಲ್ಲಿ ಇವೆ. ಆದರೆ ಇದನ್ನು ಸಮರ್ಪಕವಾಗಿ ಬಳಸಿ ಚಿಕಿತ್ಸೆ ಒದಗಿಸಲು ವೆನ್ಲಾಕ್ ಆಸ್ಪತ್ರೆ ಸಿದ್ಧವಾಗಿದೆಯೇ ಎನ್ನುವ ಪ್ರಶ್ನೆಯನ್ನು ಭಾನುವಾರ ಆಸ್ಪತ್ರೆಯಲ್ಲಿ ನಡೆದ ಘಟನೆ ಹುಟ್ಟುಹಾಕಿದೆ.
ಮಾಸ್ಕ್‌ಗಳಲ್ಲಿ ಮೂರು ರೀತಿ ಇದ್ದು, ಕರೊನಾ ಶಂಕಿತ ರೋಗಿಗಳನ್ನು ತಪಾಸಣೆ ನಡೆಸಲು ತ್ರೀ ಲೇಯರ್ ಮಾಸ್ಕ್ ಬಳಸಲಾಗುತ್ತದೆ ಮತ್ತು ಕರೊನಾ ಸೋಂಕು ದೃಢಪಟ್ಟ ರೋಗಿಗಳ ಉಪಚಾರ ನಡೆಸುವವರು ಕಡ್ಡಾಯವಾಗಿ ಎನ್ ೯೫ ಮಾಸ್ಕ್ ಧರಿಸಬೇಕು. ಆದರೆ ಇವುಗಳ ಕೊರತೆ ಇದೆ ಎಂದು ಮೂಲಗಳು ದೃಢಪಡಿಸಿವೆ.