ಜಿಲ್ಲೆ

ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷ ವಿರುದ್ಧ ಅವಿಶ್ವಾಸ ಮಂಡನೆ

* ಹತ್ತು ಸದಸ್ಯರಿಂದ ಉಪವಿಭಾಗಾಧಿಕಾರಿ ಬಿನೋಯ್‌ಗೆ ಪತ್ರ ಸಲ್ಲಿಕೆ

ಕೈಲಾಂಚ

ಹೋಬಳಿಯ ಬನ್ನಿಕುಪ್ಪೆ(ಕೈ) ಗ್ರಾಮ ಪಂಚಾಯಿತಿಯ ಹತ್ತು ಮಂದಿ ಸದಸ್ಯರು ಹಾಲಿ ಅಧ್ಯಕ್ಷ ಬಿ.ಸಿ ಹೇಮಂತ್‌ಕುಮಾರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಪತ್ರವನ್ನು ರಾಮನಗರ ಉಪವಿಭಾಗಾಧಿಕಾರಿ ಬಿನೋಯ್ ಅವರಿಗೆ ಮಂಗಳವಾರ ಸಲ್ಲಿಸಿದ್ದಾರೆ.

ಗ್ರಾಪಂ ಅಧ್ಯಕ್ಷ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಕಾರಣ ನೀಡಿ ಅವಿಶ್ವಾಸ ಮಂಡನೆ ಮಾಡುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿ ಉಪವಿಭಾಗಾಧಿಕಾರಿಗಳನ್ನು ಕೋರಿದ್ದಾರೆ.

ಮಂಗಳವಾರ ರಾಮನಗರದ ಜಿಲ್ಲಾ ಕೇಂದ್ರದ ಕಚೇರಿಯಲ್ಲಿ ಉಪವಿಭಾಗಾಧಿಕಾರಿಗಳು ಇರಲಿಲ್ಲ. ಕಂದಾಯ ಇಲಾಖೆ ಕೆಲಸದ ನಿಮಿತ್ತ ಕನಕಪುರ ತಾಲೂಕು ಕಚೇರಿಯಲ್ಲಿದ್ದ ಉಪವಿಭಾಗಾಧಿಕಾರಿ ಬಿನೋಯ್ ಅವರನ್ನು ಅಲ್ಲಿಯೇ 10 ಮಂದಿ ಸದಸ್ಯರು ಭೇಟಿ ಮಾಡಿ ಅವಿಶ್ವಾಸಗೊತ್ತುವಳಿ ಪತ್ರವನ್ನು ಸಲ್ಲಿಸಿ ಹಾಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹೇಮಂತ್‌ಕುಮಾರ್ ಮುಂದುವರಿಯಲು ನಮ್ಮ ಬೆಂಬಲ ಇಲ್ಲ ಎಂದು ತಿಳಿಸಿದ್ದಾರೆ.

ಅವಿಶ್ವಾಸ ಮಂಡನೆ ಪತ್ರವನ್ನು ಉಪವಿಭಾಗಾಧಿಕಾರಿ ಸ್ವೀಕರಿಸಿದ್ದು, ಅವಿಶ್ವಾಸಗೊತ್ತುವಳಿ ಸಭೆಯನ್ನು ಉಪವಿಭಾಗಾಧಿಕಾರಿ ಕರೆಯಬೇಕಿದೆ. ಸಭೆಯಲ್ಲಿ ಮೂರನೇ ಎರಡು ಭಾಗದಷ್ಟು ಸದಸ್ಯರು ಗೊತ್ತುವಳಿಯ ಪರವಾಗಿ ಮತದಾನ ಮಾಡಿದಲ್ಲಿ ಅಧ್ಯಕ್ಷ ಸ್ಥಾನದಿಂದ ಹೇಮಂತ್‌ಕುಮಾರ್ ಅಧಿಕಾರ ಕಳೆದುಕೊಳ್ಳಲಿದ್ದಾರೆ.

13 ಸದಸ್ಯ ಬಲ ಹೊಂದಿರುವ ಬನ್ನಿಕುಪ್ಪೆ ಗ್ರಾಪಂನಲ್ಲಿ ಅಧ್ಯಕ್ಷರ ವಿರುದ್ಧ ಮಂಡಿಸಿರುವ ಗೊತ್ತುವಳಿ ಊರ್ಜಿತವಾಗಿ ಅಧ್ಯಕ್ಷ ಸ್ಥಾನದಿಂದ ಇಳಿಸಬೇಕಾದಲ್ಲಿ ಕನಿಷ್ಠ ಮೂರನೇ ಎರಡು ಭಾಗ ಅಂದರೆ 9 ಮಂದಿ ಸದಸ್ಯರು ಗೊತ್ತುವಳಿಯ ಪರವಾಗಿ ಮತಚಲಾಯಿಸಬೇಕು. ಉಪ ವಿಭಾಗಾಧಿಕಾರಿ ಪತ್ರದಲ್ಲಿ ಅವರ ಸಮ್ಮುಖದಲ್ಲೇ 10 ಮಂದಿ ಹಾಜರಾಗಿ ಸಹಿಹಾಕಿ ಪತ್ರ ನೀಡಿದ್ದು, ಅವಿಶ್ವಾಸ ಮಂಡನೆ ಸಭೆಯಲ್ಲಿ ಸಹಿ ಹಾಕಿರುವವರೆಲ್ಲರೂ ಹಾಜರಾಗಿ ನಿರ್ಣಯದ ಪರವಾಗಿ ಮತಚಲಾಯಿಸಬೇಕಾಗುತ್ತದೆ.

ಸಹಿ ಹಾಕಿರುವ ಸದಸ್ಯರು:

ಎನ್.ವೈ.ಚಲುವರಾಜು, ನವೀನಾಕುಮಾರಿ, ರಾಜಮ್ಮ, ಶೋಭಾ, ಶಿವಮ್ಮ, ರವಿಕುಮಾರ್, ಡಿ.ಕುಮಾರ, ಚಂದ್ರಗಿರಿ, ಜ್ಯೋತಿ, ಪೂರ್ಣಿಮಾ.