ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷೆ ಜಿ.ಎಸ್.ಶ್ರೀದೇವಿ ಚಕ್ರವರ್ತಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಅಂಗೀಕರವಾಗಿದೆ. ಬುಧವಾರ ಕರೆದಿದ್ದ ಕೌನ್ಸಿಲ್ ವಿಶೇಷ ಸಾಮಾನ್ಯ ಸಭೆಯಲ್ಲಿ 35 ಸದಸ್ಯರ ಪೈಕಿ 32 ಸದಸ್ಯರು ಅವಿಶ್ವಾಸದ ಪರ ಮತಚಲಾಯಿಸುವ ಮೂಲಕ ಅವರ ಪದುಚ್ಯುತಿಯನ್ನು ಬೆಂಬಲಿಸಿದರು.
ಕೌನ್ಸಿಲ್ ಸಾಮಾನ್ಯ ಸಭೆಗಳಲ್ಲಿ ಅಗೌರವದಿಂದ ವರ್ತನೆ, ಅಧಿಕಾರಿಗಳಿಗೆ ಅಗೌರವ, ಏಕವಚನ ಬಳಕೆ ಕುರಿತು ಶ್ರೀದೇವಿ ಚಕ್ರವರ್ತಿ ಅವರ ನಡೆ ಕುರಿತು ದಿನಪತ್ರಿಕೆಗಳಲ್ಲಿ ಪ್ರಕಟವಾಗಿ ಸದಸ್ಯರಿಗೆ ಪದೆ ಪದೇ ಮುಜುಗರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿಶೇಷ ಸಾಮಾನ್ಯ ಸಭೆ ಕರೆಯಲು ಸದಸ್ಯರನೇಕರು ಜೂ. 27ರಂದು ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರು.
ಮನವಿಗೆ ಸಮ್ಮತಿಸಿದ್ದ ಅಧ್ಯಕ್ಷೆ ಸುಮಿತಾ ರಾಘವೇಂದ್ರ ವಿಶೇಷ ಸಾಮನ್ಯ ಸಭೆ ಕರೆದಿದ್ದನ್ನು ಆರಂಭದಲ್ಲಿ ಪ್ರಸ್ತಾಪಿಸಲಾಯಿತು. ವಿಷಯ ಮಂಡಿಸುತ್ತಿದ್ದಂತೆ ಅವಿಶ್ವಾಸ ಗೊತ್ತುವಳಿ ಪರ-ವಿರುದ್ಧ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಲು ಅಧ್ಯಕ್ಷರು ಮನವಿ ಮಾಡಿದರು.
ಆದರೆ 35 ಸದಸ್ಯರ ಪೈಕಿ ಹಾಜರಿದ್ದ 33 ಸದಸ್ಯರು ಅವಿಶ್ವಾಸ ಗೊತ್ತುವಳಿ ಪರ ಮತ ಚಲಾಯಿಸಿದ್ದರಿಂದ ಶ್ರೀದೇವಿ ಚಕ್ರವರ್ತಿ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಅಂಗೀಕಾರವಾಯಿತು. ಗೊತ್ತುವಳಿ ಅಂಗೀಕಾರ ಪ್ರಕಟಿಸಿದ ಆಯುಕ್ತೆ ಎಂ.ರೇಣುಕಾ, ಸಭೆ ತೆಗೆದುಕೊಂಡ ನಿರ್ಣಯವನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಇಂದೇ ಪತ್ರ ಮುಖೇನ ತಿಳಿಸಲಾಗುವುದು ಹಾಗೂ ಹೊಸಬರ ಆಯ್ಕೆಗೆ ಜಿಲ್ಲಾಧಿಕಾರಿ ದಿನಾಂಕ ನಿಗದಿಪಡಿಸಿದ ಬಳಿಕ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸ್ರುಲ್ಲಾ ಇದ್ದರು.
ತಮ್ಮ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿ ಈಚೆಗೆ ಹೇಳಿಕೆ ನೀಡಿದ್ದ ಶ್ರೀದೇವಿ, ಮಂಗಳವಾರ ಜಿಲ್ಲಾಧಿಕಾರಿಗೆ ರಾಜೀನಾಮೆ ಸಲ್ಲಿಸಿದ್ದರು. ಸಭೆಗೂ ಗೈರು ಹಾಜರಾಗಿದ್ದರು.