ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರೂ ಮೂಲ ಸೌಕರ್ಯ ಒದಗಿಸದ ಪರಿಣಾಮ ಪರಿತಪಿಸುವಂತಾಗಿದೆ.
ಪ್ರವಾಸಿಗರಿಂದ ಲಕ್ಷಾಂತರ ರೂ. ಆದಾಯ ಗಳಿಸುವ ಅರಣ್ಯ ಇಲಾಖೆ ಹಾಗೂ ಸಾರಿಗೆ ಸಂಸ್ಥೆ ಪ್ರವಾಸಿಗರ ಅನುಕೂಲಕ್ಕಾಗಿ ಯಾವುದೇ ಸೌಕರ್ಯ ಕಲ್ಪಿಸದ ಪರಿಣಾಮ ಬಿಸಿಲು ಮತ್ತು ಮಳೆಯಲ್ಲಿ ಬಸವಳಿಯುವಂತಾಗಿದೆ.
ತಾಲೂಕು ಕೇಂದ್ರದಿಂದ 14 ಕಿಲೋಮೀಟರ್ ಅಂತರದಲ್ಲಿರುವ ಬೆಟ್ಟ ಪ್ರವಾಸಿಗರ ಪ್ರಮುಖ ಆಕರ್ಷಣೀಯ ತಾಣವಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ದಟ್ಟಾರಣ್ಯದಿಂದ ಕೂಡಿದೆ. ಸಮುದ್ರ ಮಟ್ಟದಿಂದ 4,770 ಅಡಿ ಎತ್ತರವಿರುವ ಬೆಟ್ಟದ ಮೇಲಿರುವ ಗೋಪಾಲಸ್ವಾಮಿ ದೇವಾಲಯ ವರ್ಷದ ಎಲ್ಲ ಕಾಲದಲ್ಲಿಯೂ ಹಿಮಚ್ಛಾದಿತವಾಗಿ ರುವುದರಿಂದ ಇದನ್ನು ಹಿಮವದ್ ಗೋಪಾಲ ಎಂದು ಹೆಸರಿಸಲಾಗಿದೆ. ಸದಾ ಕಾಲವೂ ತಂಪಾಗಿರುವುದರಿಂದ ತಾಲೂಕಿನ ಊಟಿ ಎಂದೂ ಕರೆಯಲಾಗುತ್ತದೆ.
ಮೋಜು ಮಸ್ತಿಗಾಗಿ ಹೆಚ್ಚಿನ ಜನರು ಬೆಟ್ಟಕ್ಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 2013ರಿಂದ ಬೆಟ್ಟಕ್ಕೆ ಬೈಕ್, ಕಾರು ಸೇರಿದಂತೆ ಎಲ್ಲ ರೀತಿಯ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಇದರಿಂದ ಸ್ಥಳೀಯರು ಸೇರಿದಂತೆ ಎಲ್ಲ ಪ್ರವಾಸಿಗರು ತಮ್ಮ ವಾಹನಗಳನ್ನು ಬೆಟ್ಟದ ತಪ್ಪಲಿನಲ್ಲಿ ನಿಲ್ಲಿಸಿ ಸಾರಿಗೆ ಬಸ್‌ಗಳಲ್ಲಿ ಹೋಗಬೇಕಾಗಿದ್ದು ಇದಕ್ಕಾಗಿ ಸಾರಿಗೆ ಸಂಸ್ಥೆ ಬಸ್‌ಗಳನ್ನು ನಿಯೋಜಿಸಿದೆ.
ಸಾರಿಗೆ ಸಂಸ್ಥೆಯ ಮೂರು ಬಸ್‌ಗಳು ನಿತ್ಯ ಸಂಚರಿಸುತ್ತವೆ. ತಪ್ಪಲಿನಿಂದ ಪ್ರವಾಸಿಗರನ್ನು ಬೆಟ್ಟಕ್ಕೆ ಕರೆದೊಯ್ದು ವಾಪಸ್ ಕರೆತರುತ್ತವೆ. ಆದರೆ ಶನಿವಾರ, ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ ಮಾತ್ರ ಹೆಚ್ಚಿನ ಭಕ್ತರು ಆಗಮಿಸುವುದರಿಂದ ಸಾರಿಗೆ ಸಂಸ್ಥೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗುತ್ತಿತ್ತು. ಆದರೆ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾದ ಪರಿಣಾಮ ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲು ಮುಂದಾಗದ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ. ಸಾಲು ಸಾಲು ಹಾಗೂ ವಾರಾಂತ್ಯದ ರಜೆ ಸಂದರ್ಭದಲ್ಲಿ ಸಾಗರೋಪಾದಿಯಲ್ಲಿ ಆಗಮಿಸುವ ಪ್ರವಾಸಿಗರು ಇದೀಗ ಗಂಟೆಗಟ್ಟಲೇ ಕಾದು ನಿಲ್ಲುವಂತಾಗಿದೆ.
ಮಹಿಳೆಯರು, ವೃದ್ಧರು, ಮಕ್ಕಳು ಎನ್ನದೆ ಕಳೆದ ತಿಂಗಳವರೆಗೂ ಕಾಡಿದ ಬಿರುಬಿಸಿಲಿನಲ್ಲಿ ಸುಮಾರು ಎರಡು ಕಿಲೋಮೀಟರ್ ಉದ್ದಕ್ಕೂ ಕಾದು ನಿಲ್ಲುತ್ತಿದ್ದರು. ಇತ್ತೀಚೆಗೆ ಮಳೆಗಾಲ ಆರಂಭವಾಗಿದ್ದು ಇದ್ದಕ್ಕಿದ್ದಂತೆ ಸುರಿಯುವ ಮಳೆಯನ್ನೂ ಲೆಕ್ಕಿಸದೆ ನೆನೆಯುತ್ತ ಬಸ್‌ಗಾಗಿ ಕಾದು ನಿಲ್ಲುತ್ತಿದ್ದಾರೆ.
ತಪ್ಪಲಿನಿಂದ 6 ಕಿಲೋಮೀಟರ್ ಅಂತರದಲ್ಲಿರುವ ಬೆಟ್ಟಕ್ಕೆ ಹೋಗಿಬರಲು ಸಾರಿಗೆ ಸಂಸ್ಥೆ ಪ್ರತಿ ಪ್ರಯಾಣಿಕರಿಂದ 60 ರೂ. ಟಿಕೆಟ್ ನಿಗದಿ ಪಡಿಸಿದೆ. ತೀವ್ರ ಕಡಿದಾದ ಹಾಗೂ ಇಕ್ಕಟ್ಟಾದ ರಸ್ತೆಯಲ್ಲಿ ಸಾಗಲು ಉತ್ತಮ ಸ್ಥಿತಿಯಲ್ಲಿರುವ ಬಸ್‌ಗಳು ಹಾಗೂ ನುರಿತ ಚಾಲಕರನ್ನು ನಿಯೋಜಿಸಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಇದರಿಂದ ಇಷ್ಟು ದಿನದವರೆಗೂ ಯಾವುದೇ ಅನಾಹುತ ಸಂಭವಿಸಿಲ್ಲದಿರುವುದು ಪ್ರವಾಸಿಗರಲ್ಲಿ ಸುರಕ್ಷತಾ ಭಾವನೆ ಮೂಡಿಸಿದೆ.
ಸಾರಿಗೆ-ಅರಣ್ಯ ಇಲಾಖೆಗೆ ಆದಾಯದ ಮೂಲ: ಸಾರಿಗೆ ಸಂಸ್ಥೆಗೆ ಸಾಮಾನ್ಯ ದಿನಗಳಲ್ಲಿ 50 ಸಾವಿರ ರೂ.ನಿಂದ 60,000 ರೂ. ಹಾಗೂ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಬರುವ ಪ್ರವಾಸಿಗರಿಂದ ಮೂರು ಲಕ್ಷ ರೂ. ಆದಾಯ ಸಂಗ್ರಹವಾಗುತ್ತಿದೆ. ಆದರೆ ಟಿಕೆಟ್ ಕೌಂಟರ್ ಬಳಿ ಹಾಗೂ ಬಸ್ ಹತ್ತುವವರೆಗೆ ಪ್ರಯಾಣಿಕರಿಗೆ ಬಿಸಿಲು ಮತ್ತು ಮಳೆ ಹಾವಳಿಯಿಂದ ಪಾರಾಗಲು ನೆರಳಿನ ವ್ಯವಸ್ಥೆ ಮಾಡಲಾಗಿಲ್ಲ.
ಎಲ್ಲ ವಾಹನಗಳಿಂದಲೂ ಸಾಮಾನ್ಯ ದಿನಗಳಲ್ಲಿ 4 ಸಾವಿರದ 5ಸಾವಿರ ರೂ., ರಜಾ ದಿನಗಳಲ್ಲಿ 20 ಸಾವಿರದಿಂದ 25 ಸಾವಿರ ರೂ. ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಅರಣ್ಯ ಇಲಾಖೆಗೆ ಮಾಸಿಕ 4 ಲಕ್ಷದಿಂದ 5 ಲಕ್ಷ ರೂ.ವರೆಗೂ ಆದಾಯ ಬರುತ್ತಿದೆ. ಆದರೆ ಪಾರ್ಕಿಂಗ್ ಏರಿಯಾದಲ್ಲಿ ಹಾಗೂ ಬೆಟ್ಟದ ಮೇಲೆ ಶೌಚಗೃಹ ಸೌಲಭ್ಯ ಹೊರತುಪಡಿಸಿ ಪ್ರಯಾಣಿಕರಿಗೆ ಯಾವುದೇ ಸೌಕರ್ಯ ಕಲ್ಪಿಸಿಲ್ಲ.
ರಜಾ ದಿನಗಳಲ್ಲಿ ಊಟಿ ಕಡೆಗೆ ಹೋಗುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂಡೀಪುರ ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸುವುದರಿಂದ ನೂಕು ನುಗ್ಗಲು ಉಂಟಾಗುತ್ತಿದೆ. ಅಲ್ಲದೆ ಶೌಚಗೃಹ ಸೌಲಭ್ಯ ನೀಡಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹೆಚ್ಚುವರಿ ಬಸ್ ಕಳಿಸುವಂತೆ ಸಾರಿಗೆ ಸಂಸ್ಥೆಗೆ ಮಾಹಿತಿ ನೀಡಲಾಗುತ್ತದೆ. ಬಸ್‌ಗಳಲ್ಲಿ ಹೋಗಲಾಗದ ಪ್ರವಾಸಿಗರು ಹಗ್ಗದಹಳ್ಳ ಪರಿಸರ ಅಭಿವೃದ್ಧಿ ಸಮಿತಿಯ ಜೀಪುಗಳಿಗೆ ಹಣ ಪಾವತಿಸಿ ತೆರಳಬಹುದಾಗಿದೆ. ಪಾರ್ಕಿಂಗ್ ಒಂದರಿಂದಲೇ ಬಂಡೀಪುರ ಹುಲಿ ಸಂರಕ್ಷಣಾ ನಿಧಿಗೆ (ಬಿಟಿಸಿಎಫ್) ನಿತ್ಯ 4 ಸಾವಿರ ರೂ.ನಿಂದ 5 ಸಾವಿರ ರೂ. ಹಾಗೂ ವಾರಾಂತ್ಯದಲ್ಲಿ 25 ಸಾವಿರದಿಂದ 30 ಸಾವಿರ ರೂ. ಆದಾಯ ಬರುತ್ತಿದೆ.
ಮಂಜುನಾಥ್ ಆರ್‌ಎಫ್‌ಒ, ಗೋಪಾಲಸ್ವಾಮಿ ಬೆಟ್ಟ ವಲಯ
ಪ್ರಯಾಣಿಕರು ಟಿಕೆಟ್ ಖರೀದಿಸಲು ನಿಲ್ಲುವ ಸರತಿ ಸಾಲಿಗೆ ಪ್ಲಾಸ್ಟಿಕ್ ಶೀಟ್‌ಗಳಿಂದ ನೆರಳು ಒದಗಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಬೆಟ್ಟಕ್ಕೆ ಹೋಗಿ ಬರುವ ಪ್ರಯಾಣಿಕರ ಸುರಕ್ಷತೆಗೆ ಉತ್ತಮ ಸ್ಥಿಯಲ್ಲಿರುವ ಬಸ್‌ಗಳು ಹಾಗೂ ನುರಿತ ಚಾಲಕರನ್ನು ನಿಯೋಜಿಸಲಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್ ನಿಯೋಜಿಸಲಾಗುತ್ತದೆ. ಶನಿವಾರ ಭಾನುವಾರ ಹಾಗೂ ರಜಾ ದಿನಗಳಲ್ಲಿ ನಿತ್ಯ 3 ಲಕ್ಷ ರೂ.ವರೆಗೂ ಆದಾಯ ಸಂಗ್ರಹವಾಗುತ್ತಿದೆ.
> ತ್ಯಾಗರಾಜು ಸಾರಿಗೆ ಡಿಪೋ ಮ್ಯಾನೇಜರ್