ಜಿಲ್ಲೆ

ಖಾಲಿ ನಿವೇಶನ-ನೆಮ್ಮದಿ ಆಪೋಸನ

ವೀರೇಶ ಸೌದ್ರಿ

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಕಿತ್ತು ಹೋಗಿರುವ ತಂತಿಬೇಲಿ, ಪಕ್ಕದಲ್ಲೇ ತಿಪ್ಪೆಗುಂಡಿ, ಕಸದರಾಶಿ, ಸುತ್ತಲೂ ಗಿಡಗಂಟೆಗಳು, ಅಲ್ಲೇ ಹಳೆಯ ಕಟ್ಟಡದ ಅವಶೇಷ, ಮುಂದೆ ಹೋಗಲಾಗದೆ ಅಲ್ಲೇ ನಿಂತು ದುರ್ನಾತ ಬೀರುತ್ತಿರುವ ಚರಂಡಿ ನೀರು….! ಇದು ಪಾಳುಬಿದ್ದಿರುವ ಬಂಗಲೆಯ ಚಿತ್ರಣವಲ್ಲ. ಬದಲಾಗಿ ನಗರ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳ ಸ್ವರೂಪ.

ನಿವೇಶನಗಳ ಮಾಲೀಕರ ಅಸಡ್ಡೆಯಿಂದಾಗಿ ಅಕ್ಕಪಕ್ಕದ ಮನೆಗಳ ನಿವಾಸಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ. ಪ್ರತಿಷ್ಠಿತ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದೇವೆಂದು ಖಾಲಿ ನಿವೇಶನಗಳ ಪಕ್ಕದಲ್ಲಿ ವಾಸವಾಗಿರುವ ನಿವಾಸಿಗಳು ಹೆಸರಿಗೆ ಮಾತ್ರ ಹೇಳಿ ಕೊಳ್ಳಬೇಕಷ್ಟೇ.
ಕೊಳಚೆ ಪ್ರದೇಶದ ವಾತಾವರಣ ಅಲ್ಲಿ ಸೃಷ್ಟಿಯಾಗಿರುವುದು ಮಾತ್ರ ಅಲ್ಲಿನ ವಾಸ್ತವ ಸಂಗತಿ. ಖಾಲಿ ನಿವೇಶನಗಳಲ್ಲಿ ಬೆಳೆದಿರುವ ದೊಡ್ಡ ದೊಡ್ಡ ಪೊದೆಗಳು ಕಳ್ಳಕಾಕರಿಗೆ ಪ್ರಶಸ್ತ ತಾಣಗಳಾಗಿವೆ. ಜತೆಗೆ ತಪ್ಪಿಸಿಕೊಳ್ಳಲು ಸಹಕಾರಿಯಾಗಿವೆ.

ವಿಷಜಂತುಗಳ ಆವಾಸ ಸ್ಥಾನ…

ನಿರ್ವಹಣೆಯಿಲ್ಲದೆ ಕಾಡಿನಂತೆ ಪರಿವರ್ತನೆಯಾಗಿರುವ ಖಾಲಿ ನಿವೇಶನಗಳಲ್ಲಿ ಬೀದಿ ದನಗಳು, ಹಂದಿ, ನಾಯಿಗಳು ಸ್ವಚ್ಛಂದವಾಗಿ ಆಹಾರ ಅರಸುತ್ತಾ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆ ನೀಡುತ್ತಿವೆ. ಖಾಲಿ ನಿವೇಶನಗಳಲ್ಲಿ ವಿಷ ಜಂತುಗಳು ಸೇರಿ ಪಕ್ಕದ ನಿವಾಸಿಗಳಿಗೆ ಆತಂಕ ತಂದೊಡ್ಡಿವೆ. ಹೆಗ್ಗಣಗಳು ಪಕ್ಕದ ನಿವೇಶನಕ್ಕೆ ಹೊಂದಿಕೊಂಡ ಮನೆಯ ಅಡಿಪಾಯಕ್ಕೆ ಕನ್ನ ಹಾಕಿ ಶಿಸ್ತಾಗಿ ತನ್ನ ಮನೆ ನಿರ್ಮಾಣ ಮಾಡಿಕೊಂಡು ಚರಂಡಿಗೂ ಮನೆಗೂ ಆಗಾಗ ಓಡಾಡಿಕೊಂಡಿವೆ.

ಸಾಂಕ್ರಾಮಿಕ ರೋಗಗಳ ಭೀತಿ…

ಖಾಲಿ ನಿವೇಶನದಲ್ಲಿ ಚರಂಡಿ ನೀರು ಹರಿಯದೆ ನಿಂತು ದುರ್ವಾಸನೆ ಬೀರುತ್ತ ಸುತ್ತಲಿನ ಪರಿಸರ ಹಾಳಾಗಿದೆ. ಜತೆಗೆ ಕೆಲವರು ಸುತ್ತಮುತ್ತಲ ಕಸವನ್ನು ಇಲ್ಲಿಯೇ ತಂದು ಬಿಸಾಡುತ್ತಿರುವುದರಿಂದ ಅನಧಿಕೃತ ಕಸದ ತೊಟ್ಟಿಗಳಿಂದ ನಿವಾಸಿಗಳಿಗೆ ತೊಂದರೆ ಎದುರಾಗಿದೆ. ಕೆಲ ಬಡಾವಣೆಗಳಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೊಳಚೆ ನೀರು ನಿವೇಶನದಲ್ಲೇ ನಿಂತು ಸೊಳ್ಳೆಗಳಿಗೆ ಪ್ರಶಸ್ತ ತಾಣಗಳಾಗಿರುವುದರಿಂದ ಪಕ್ಕದ ನಿವಾಸಿಗಳು ಸಾಂಕ್ರಾಮಿಕ ರೋಗಗಳ ಭೀತಿಯ ಆತಂಕದಲ್ಲಿದ್ದಾರೆ.

ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ನಗರಸಭೆ ಸೂಚನೆ ನೀಡದಿರುವುದು ಮಾಲೀಕರ ಅಸಡ್ಡೆಗೆ ಕಾರಣವಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.

ಪತ್ರಕ್ಕೆ ಸೀಮಿತ

ಖಾಲಿ ನಿವೇಶನ ಸ್ವಚ್ಛಗೊಳಿಸಿಕೊಳ್ಳದಿದ್ದರೆ ಅಂಥವರ ನಿವೇಶನವನ್ನು ನಗರಸಭೆಯಿಂದ ಸ್ವಚ್ಛಗೊಳಿಸಿ ಅದರ ಖರ್ಚು ವಸೂಲಿ ಮಾಡಲು ಜಾಗದ ಮೇಲೆ ಬೋಜಾ ನಮೂದಿಸಲಾಗುವುದು ಎಂದು 2019ರಲ್ಲಿಯೇ ನಗರಸಭೆ ಆಯುಕ್ತರು ಆದೇಶಿಸಿದ್ದರು. ಆದರೆ, ಈ ಆದೇಶ ಪತ್ರಕ್ಕೆ ಸೀಮಿತವಾಗಿದೆಯೇ ಹೊರತು ಜಾರಿಗೆ ಬಾರದಿರುವುದು ವಿಪರ್ಯಾಸವೇ ಸರಿ.

ಖಾಲಿ ನಿವೇಶನದಾರರು ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕು. ಕೂಡಲೇ ಮಾಲೀಕರಿಗೆ ನೋಟಿಸ್ ಜಾರಿ ಮಾಡುತ್ತೇವೆ. ನೋಟಿಸ್‌ಗೆ ಸ್ಪಂದಿಸದಿದ್ದರೆ ಅಂಥವರ ನಿವೇಶನಗಳನ್ನು ನಗರಸಭೆಯಿಂದ ಸ್ವಚ್ಛಗೊಳಿಸಿ ಅದರ ಖರ್ಚನ್ನು ತೆರಿಗೆ ಮೂಲಕ ವಸೂಲಿ ಮಾಡಲಾಗುವುದು. ಮಾಲೀಕರು ಎಚ್ಚೆತ್ತುಕೊಳ್ಳದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.ನಿಂಗಪ್ಪ ಕುಮ್ಮಣ್ಣನವರ, ರಾಣೆಬೆನ್ನೂರ ನಗರಸಭೆ ಆಯುಕ್ತ