ಚಿಕ್ಕಬಳ್ಳಾಪುರ: ಗ್ಯಾರಂಟಿ ಯೋಜನೆಗಳು ಚುನಾವಣಾ ಪೂರ್ವ ಭರವಸೆಯಂತೆ 5 ವರ್ಷ ಮುಂದುವರಿಯಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಜಾರಿಯ ಬಗ್ಗೆ ಈಗಾಗಲೇ ಹೈಕಮಾಂಡ್ ಸ್ಪಷ್ಟನೆ ನೀಡಿದೆ. ಯಾವುದೇ ಪರಿಷ್ಕರಣೆ ಅಥವಾ ಬದಲಾವಣೆ ಮಾತಿಲ್ಲ. 5 ವರ್ಷ ಅರ್ಹರಿಗೆ ಸೌಲಭ್ಯಗಳು ಸಿಗಲಿವೆ. ಇದರ ನಡುವೆ ಕೆಲವರು ಚರ್ಚೆಯ ಹೇಳಿಕೆ ನೀಡುತ್ತಿರುವುದು ವೈಯಕ್ತಿಕವಾದುದು ಎಂದರು.
ಸರ್ಕಾರದಿಂದ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಕೀಳು ರಾಜಕೀಯ ಮಾಡಲಾಗುತ್ತಿದೆ. ನಾಯಕರು ಪರಸ್ಪರ ಕೆಸರೆರಚಾಟವನ್ನು ನಿಲ್ಲಿಸಬೇಕು ಎಂದು ಮುಡಾ ನಿವೇಶನ ಹಗರಣ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ನಿವೇಶನ ಹಂಚಿಕೆಯ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದರು.
ಸಂಸದರು ಸತ್ಯಹರಿಶ್ಚಂದ್ರರಾ?: ಸ್ವಪಕ್ಷೀಯರಿಂದಲೇ ಅವ್ಯವಹಾರದ ಗುಣಗಾನ ಮಾಡಿಸಿಕೊಳ್ಳುತ್ತಿರುವ ಕ್ಷೇತ್ರದ ಸಂಸದರು ಸತ್ಯಹರಿಶ್ಚಂದ್ರರಾ? ಎಂದು ಸಚಿವ ಸುಧಾಕರ್ ಪ್ರಶ್ನಿಸಿದರು. ಈಗಾಗಲೇ ಕರೊನಾ ಹಗರಣಕ್ಕೆ ಸಂಬಂಧಿಸಿದಂತೆ ಸ್ವತಃ ಅವರ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಕಾಮಾಲೆ ಕಾಯಿಲೆ ಹೊಂದಿರುವವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ. ಇದಕ್ಕೆ ಈಗ ಅವ್ಯವಹಾರದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲ: ಅಭಿವೃದ್ಧಿ ವಿಚಾರದಲ್ಲಿ ಯಾರೇ ಆಗಲಿ ರಾಜಕೀಯ ಮಾಡಬಾರದು. ಜನರಿಗೆ ತಪ್ಪು ಸಂದೇಶ ನೀಡಿ, ದಿಕ್ಕು ತಪ್ಪಿಸಬಾರದು. ರಾಜಕೀಯವನ್ನು ಬೇರೆಯದರಲ್ಲಿ ಮಾತನಾಡಬೇಕು. ಪ್ರಸ್ತುತ ಕೈಗಾರಿಕಾಭಿವೃದ್ಧಿ ಪ್ರದೇಶಕ್ಕೆ ಭೂಸ್ವಾಧೀನಕ್ಕೆ ಸಂಬಂಧಿಸಿದ ವಿಚಾರದಲ್ಲಿ ರೈತರನ್ನು ಎತ್ತಿ ಕಟ್ಟಡಲಾಗುತ್ತಿದೆ. ವಿರೋಧಿಸಿ ಹೆಚ್ಚಿನ ಪರಿಹಾರ ಪಡೆಯಲು ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಸುಧಾಕರ್ ಕಿಡಿಕಾರಿದರು.
ವ್ಯಂಗ್ಯವಾಡಿದ ಸಚಿವರು: ಹಿಂದೆ ವಿಕಸಿತ ಚಿಕ್ಕಬಳ್ಳಾಪುರ ೋಷಣೆಯಲ್ಲಿ ಅಧಿಕಾರಕ್ಕೆ ಬಂದವರು, ಕೈಗಾರಿಕೆಗಳ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಭರವಸೆ ನೀಡಿದ್ದರು. ಆದರೆ, ಈಗ ವಿರೋಧಿಸುತ್ತಿದ್ದಾರೆ. ಮಂಚೇನಹಳ್ಳಿ ಭಾಗದಲ್ಲಿ 2 ಸಾವಿರ ಎಕರೆ ಗುರುತಿಸಿರುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಮೊದಲ ಹಂತದ ಅಧಿಸೂಚನೆ ಹೊರಡಿಸಿದೆಯೇ ಎಂದು ಸುಧಾಕರ್ ಪ್ರಶ್ನಿಸಿದರು.
ಅಧಿಕಾರ ಶಾಶ್ವತವಲ್ಲ: ಕಷ್ಟಪಟ್ಟು ದುಡಿದು ರೈತರು, ಬಡ ಮತ್ತು ಮಧ್ಯಮ ವರ್ಗದವರು ಮಕ್ಕಳನ್ನು ಓದಿಸಿದ್ದು, ಇವರಿಗೆ ಉದ್ಯೋಗಾವಕಾಶವನ್ನು ನೀಡಲು ಕೈಗಾರಿಕಾಭಿವೃದ್ಧಿ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ಭೂಮಿ ಕಳೆದುಕೊಂಡವರಿಗೆ ನಾಲ್ಕು ಪಟ್ಟು ದರ ನೀಡಲಾಗುತ್ತದೆ ಎಂದು ಸುಧಾಕರ್ ತಿಳಿಸಿದರು.
ಕೃಷ್ಣಾ ನದಿ ನೀರು ಹಂಚಿಕೆ ವಿಚಾರವು ಅಂತಾರಾಜ್ಯ ವಿಷಯ. ಇದನ್ನು ಕೇವಲ ಮಾತಿನಲ್ಲಿ ಚರ್ಚಿಸಲು ಆಗುವುದಿಲ್ಲ. ಇದರ ಅರಿವಿದ್ದರೂ ರಾಜ್ಯ ಸರ್ಕಾರ ಮನಸ್ಸು ಮಾಡಿದರೆ, 6 ತಿಂಗಳಲ್ಲಿ ನೀರು ಲಭ್ಯವಾಗುತ್ತದೆ ಎಂಬ ಹೇಳಿಕೆಯನ್ನು ನೀಡುವುದು ಸರಿಯೇ? ಎಂದು ಪ್ರಶ್ನಿಸಿದರು. ಅಧಿಕಾರವು ಎಂದಿಗೂ ಶಾಶ್ವತವಲ್ಲ. ಅವಕಾಶ ಸಿಕ್ಕಾಗ ಜನಪರ ಕೆಲಸಗಳನ್ನು ಕೈಗೊಳ್ಳಬೇಕು. ಇದನ್ನು ಬಿಟ್ಟು ಕುಟುಂಬ ಮತ್ತು ಬಳಗದ ಆದಾಯ ಹೆಚ್ಚಿಸಿಕೊಳ್ಳುವುದಲ್ಲ ಎಂದು ಕಿಡಿಕಾರಿದರು.