ಜಿಲ್ಲೆ

ಸಂಜೆ 5 ಗಂಟೆಗೇ ಬಸ್ಸಿಲ್ಲ, ಪ್ರಯಾಣಿಕರಿಗೆ ತಪ್ಪದ ಪರದಾಟ ಖಾಸಗಿ ವಾಹನಗಳೇ ದಿಕ್ಕು ಪಾಸಿದ್ದರೂ ಲಾಸ್

Bengaluru Rural

ಬೆಂಗಳೂರು ಗ್ರಾಮಾಂತರ: ಲಾಕ್‌ಡೌನ್ ಸಡಿಲಿಕೆ ಬಳಿಕ ಬಸ್‌ಗಳ ಸಂಚಾರಕ್ಕೆ ಅನುಮತಿ ದೊರೆತಿದ್ದರೂ ಸಂಜೆ 7 ಗಂಟೆಯ ಸಂಚಾರ ನಿರ್ಬಂಧದಿಂದಾಗಿ ಸಂಜೆ 5 ಗಂಟೆಗೆಲ್ಲಾ ಬಸ್ ಸಂಚಾರ ಸ್ಥಗಿತಗೊಳ್ಳುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಸಂಜೆ 5 ಗಂಟೆ ಆಸುಪಾಸಿನಲ್ಲೇ ಬಸ್ ಸಂಚಾರ ಸ್ಥಗಿತಗೊಳ್ಳುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

7 ಗಂಟೆ ಬಳಿಕ ಬಸ್ ಸಂಚರಿಸಿದರೆ ಸರ್ಕಾರದ ನಿಯಮ ಉಲ್ಲಂಘನೆಯಾಗುತ್ತದೆ ಎಂಬ ಆತಂಕದಿಂದ ಅಧಿಕಾರಿಗಳು 6 ಗಂಟೆಯಷ್ಟರಲ್ಲಿ ಡಿಪೋಗೆ ಬರುವಂತೆ ಚಾಲಕರಿಗೆ ಸೂಚನೆ ನೀಡಿದ್ದಾರೆ ಎಂಬ ದೂರು ಕೇಳಿಬರುತ್ತಿದೆ.

ಬೆಂಗಳೂರಿಂದ ಬರುವವರ ಪರದಾಟ: ಪ್ರತಿನಿತ್ಯ ಸಾವಿರಾರು ಮಂದಿ ಬೆಂಗಳೂರಿಗೆ ಹೋಗಿ ಬರುತ್ತಾರೆ. ಬೆಂಗಳೂರಿನ ಟ್ರಾಫಿಕ್ ದಾಟಿ ಜಿಲ್ಲೆ ಪ್ರವೇಶಿಸುವಷ್ಟರಲ್ಲೇ ಹೊತ್ತಾಗಿರುತ್ತದೆ. 7 ಗಂಟೆವರೆಗೆ ಬಸ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಬಂದ ಪ್ರಯಾಣಿಕರು ಐದಾರು ಗಂಟೆಗೆಲ್ಲ ಬಸ್‌ಗಳಿಲ್ಲದೆ ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭವನ್ನೇ ದುರುಪಯೋಗ ಮಾಡಿಕೊಳ್ಳುತ್ತಿರುವ ಕೆಲವು ಖಾಸಗಿ ವಾಹನ ಚಾಲಕರು ದುಬಾರಿ ದರ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪಾಸ್ ಇದ್ದರೂ ಲಾಸು: ದಿನದ ಪಾಸ್ ಹಾಗೂ ತಿಂಗಳ ಪಾಸ್ ಪಡೆದರೂ ಲಾಕ್‌ಡೌನ್ ನಿಯಮದಿಂದ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ದುಡ್ಡು ಕೊಟ್ಟು ಪಾಸ್ ಪಡೆದಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಪ್ರಯಾಣಿಕರು ಬೇಸರ ತೋಡಿಕೊಳ್ಳುತ್ತಿದ್ದಾರೆ.

ಬಸ್ ತಡೆದು ಆಕ್ರೋಶ: ನೆಲಮಂಗಲದ ಬಸ್ ನಿಲ್ದಾಣದಲ್ಲಿ ಸಂಜೆ 5 ಗಂಟೆಗೆಲ್ಲ ಬಸ್ ಓಡಾಟ ಸ್ಥಗಿತಗೊಂಡ ಸುದ್ದಿ ಕೇಳಿ ಕೆರಳಿದ ಪ್ರಯಾಣಿಕರು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಪೋ ಮುಖ್ಯಸ್ಥರನ್ನು ತರಾಟೆ ತೆಗೆದುಕೊಂಡದ್ದಲ್ಲದೆ ಬಿಎಂಟಿಸಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

ಬಸ್ ಟೈಮಿಂಗ್ಸ್ ಇಲ್ಲ: ಕರೊನಾ ಹಾವಳಿಗೂ ಮುನ್ನ ನಿಗದಿತ ಸಮಯಕ್ಕೆ ಬಸ್ ಬರುತ್ತಿದ್ದುದರಿಂದ ಪ್ರಯಾಣಿಕರಿಗೆ ಕಾಯುವ ಪರಿಸ್ಥಿತಿ ಇರಲಿಲ್ಲ. ಈಗ ಲಾಕ್‌ಡೌನ್ ಸಡಿಲಿಕೆ ಬಳಿಕ ಬಿಎಂಟಿಸಿ ಬಸ್ ಸಂಚಾರ ಪುನರಾರಂಭಗೊಂಡಿದೆ. ಆದರೆ ನಿಗದಿತ ವೇಳಾಪಟ್ಟಿ ಇಲ್ಲ. ಬಸ್‌ಗಳು ಎಷ್ಟು ಗಂಟೆಗೆ ಬರುತ್ತವೆ ಎಂಬ ಮಾಹಿತಿ ಇಲ್ಲದೆ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಂತರಜಿಲ್ಲೆಯಲ್ಲಿನ ಬಸ್‌ಗಳಲ್ಲಿ ತೀರಾ ವಿರಳ ಪ್ರಯಾಣಿಕರ ಸಂಚಾರವಿದೆ. ಅಲ್ಲದೆ 7 ಗಂಟೆಗೆ ಲಾಕ್‌ಡೌನ್ ನಿಯಮ ಪಾಲನೆಯಿಂದ ಅಷ್ಟರೊಳಗೆ ಸಂಚಾರ ಸ್ಥಗಿತಗೊಳಿಸುವ ಅನಿವಾರ್ಯವೂ ಇದೆ. ಈ ಕಾರಣದಿಂದ ಸಂಜೆ ಬಳಿಕ ಕೆಲವೊಂದು ಕಡೆಗಳಲ್ಲಿ ಸಂಚಾರ ವ್ಯತ್ಯಯವಾಗುತ್ತಿದೆ. ಉಳಿದಂತೆ ಎಲ್ಲಿಯೂ ಸಮಸ್ಯೆ ಇಲ್ಲ. ಹೆಸರು ಹೇಳಲಿಚ್ಚಿಸದ ಸಾರಿಗೆ ಅಧಿಕಾರಿ