ಧನಂಜಯ ಗುರುಪುರ
ಗ್ರಾಮಕ್ಕೊಂದು ಹಿಂದು ರುದ್ರಭೂಮಿ ಸ್ಥಾಪನೆಯಾಗಬೇಕು ಎಂಬುದು ಹಿಂದಿನ ರಾಜ್ಯ ಸರ್ಕಾರದ ಆದೇಶವಾಗಿದ್ದರೂ, ಮೂರು ಗ್ರಾಮಗಳನ್ನೊಳಗೊಂಡ ಗಂಜಿಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೂ ರುದ್ರಭೂಮಿ ಇಲ್ಲದಿರುವುದು ವಿಪರ್ಯಾಸ.
ಪಂಚಾಯಿತಿ ವ್ಯಾಪ್ತಿಯ ಕೈಕಂಬದಿಂದ ಮಳಲಿಗೆ ಸಂಪರ್ಕ ಕಲ್ಪಿಸುವ ಮಳಲಿ ರಸ್ತೆಯಲ್ಲಿ ಸುಮಾರು 15 ವರ್ಷಗಳ ಹಿಂದೆ ರುದ್ರಭೂಮಿಯೊಂದು ನಿರ್ಮಾಣವಾಗಿದ್ದು, ಅಲ್ಲಿಗೆ ಸಂಪರ್ಕ ಕಲ್ಪಿಸಲು ಸುಮಾರು 250 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿತ್ತು. ಈ ರುದ್ರಭೂಮಿಯಲ್ಲಿ ಒಂದೆರಡು ಶವ ಸಂಸ್ಕಾರದ ಬಳಿಕ ಸ್ಥಳೀಯ ಅಪಾರ್ಟ್‌ಮೆಂಟ್‌ಗಳು ಮತ್ತು ಮನೆಯವರ ಆಕ್ಷೇಪ ಎದುರಾಗಿದ್ದು, ಕೆಲವೇ ದಿನಗಳಲ್ಲಿ ರುದ್ರಭೂಮಿ ಮುಚ್ಚಲ್ಪಟ್ಟಿತ್ತು. ಈಗ ಪಾಳು ಬಿದ್ದಿರುವ ರುದ್ರಭೂಮಿ ಕಾಣದಷ್ಟು ದಟ್ಟವಾದ ಗಿಡಗಂಟಿ-ಮರಗಳು ಬೆಳೆದಿವೆ. ಬೃಹತ್ ಪ್ರಮಾಣದ ತ್ಯಾಜ್ಯ ಎಸೆದು ರಸ್ತೆ ಬಂದ್ ಮಾಡಲಾಗಿದೆ. ಕಬ್ಬಿಣದ ಉಪಕರಣಗಳು ಕಳ್ಳರ ಪಾಲಾಗಿವೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ರುದ್ರಭೂಮಿ ಇಲ್ಲದೆ ಗ್ರಾಮದ ಮಂದಿ ಶವ ಸಂಸ್ಕಾರಕ್ಕಾಗಿ ಐದಾರು ಕಿ.ಮೀ ದೂರದ ಕಂದಾವರ ಅಥವಾ ಪಡುಪೆರಾರ ಪಂಚಾಯಿತಿ ವ್ಯಾಪ್ತಿಯ ರುದ್ರಭೂಮಿಯನ್ನು ಅವಲಂಬಿಸಬೇಕಾಗಿದೆ. ಮಳಲಿ, ತೆಂಕ ಉಳಿಪಾಡಿ, ಬಡಗ ಉಳಿಪಾಡಿ, ಮೊಗರು ಗ್ರಾಮ ವ್ಯಾಪ್ತಿಯಲ್ಲಿ ಸಂಜೆ ವೇಳೆ ಮೃತಪಟ್ಟರೆ ಮರುದಿನ ಮಧ್ಯಾಹ್ನದವರೆಗೆ ಮನೆಯಲ್ಲೇ ಶವ ಇಟ್ಟು ಕಾಯಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಸಂಜೆಯಾದರೆ ಕಂದಾವರ ಮತ್ತು ಪಡುಪೆರಾರದಲ್ಲಿ ಶವ ಸಂಸ್ಕಾರ ಮಾಡುವುದಿಲ್ಲ.
ಗಂಜಿಮಠ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದು ರುದ್ರಭೂಮಿ ಸ್ಥಾಪಿಸಿ, ಇಲ್ಲಿನ ಜನರ ಬಹುದಿನಗಳ ಕನಸು ನನಸಾಗಿಸಬೇಕು ಎಂದು ಪಂಚಾಯಿತಿ ಮಾಜಿ ಸದಸ್ಯ ಬೂಬ ಆಗ್ರಹಿಸಿದ್ದಾರೆ.
ಕೈಕಂಬ ಬಳಿ ನಿರ್ಮಿಸಿದ ರುದ್ರಭೂಮಿಗೆ ಸ್ಥಳೀಯರಿಂದ ಆಕ್ಷೇಪ ಎದುರಾಯಿತು. ಅದೀಗ ಮುಚ್ಚಲ್ಪಟ್ಟಿದೆ. ಬಳಿಕ ಮಳಲಿ ಹೊಗೆ ಯಾರ್ಡ್ ಬಳಿ ಜಾಗ ಗುರುತಿಸಿ, ಸಮತಟ್ಟು ಕಾಮಗಾರಿ ನಡೆಯುತ್ತಿರುವಾಗಲೇ ಮಠ ಮತ್ತು ಮಂದಿರಗಳ ಸಹಿತ ಸುತ್ತಲಿನ ಪ್ರದೇಶದ ಜನರಿಂದ ವಿರೋಧ ವ್ಯಕ್ತವಾಯಿತು. ಪಂಚಾಯಿತಿ ವ್ಯಾಪ್ತಿಯಲ್ಲಿ ರುದ್ರಭೂಮಿ ಹಾಗೂ ಘನ ತ್ಯಾಜ್ಯ ಘಟಕ ಸ್ಥಾಪನೆಗೆ ಈಗ ಸೂಕ್ತ ಜಾಗ ಹುಡುಕಲಾಗುತ್ತಿದೆ.
ನೋಣಯ್ಯ ಕೋಟ್ಯಾನ್, ಅಧ್ಯಕ್ಷ, ಗಂಜಿಮಠ ಪಂಚಾಯಿತಿ
ದೂರದ ಸ್ಮಶಾನಗಳಿಗೆ ಶವ ಕೊಂಡೊಯ್ದು ಸಂಸ್ಕಾರ ನಡೆಸುವುದು ದುಬಾರಿಯಾಗಿದೆ. ಅನ್ಯ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೆರಡು ಮರಣ ಆದರೆ, ಈ ಗ್ರಾಮದ ಶವಗಳ ಸಂಸ್ಕಾರಕ್ಕೆ ತಾಸುಗಟ್ಟೆಲೆ ಕಾಯಬೇಕಾಗುತ್ತದೆ. ಹಾಗಾಗಿ ಗಂಜಿಮಠ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ರುದ್ರಭೂಮಿ ನಿರ್ಮಾಣವಾಗಬೇಕು.
ಪಾರ್ವತಿ, ಪಂಚಾಯಿತಿ ಮಾಜಿ ಸದಸ್ಯೆ