ಜಿಲ್ಲೆ

ನನ್ನನ್ನು ಯಾವ ಬಿಜೆಪಿ ಶಾಸಕರೂ ಸಂಪರ್ಕಿಸಿಲ್ಲ: ಕೆ.ಹರೀಶ್ ಗೌಡ

ಆರ್.ಕೃಷ್ಣ

ಮೈಸೂರು: ನನ್ನನ್ನು ಯಾವ ಬಿಜೆಪಿ ಶಾಸಕರೂ ಸಂಪರ್ಕ ಮಾಡಿಲ್ಲ, ನಮ್ಮನ್ನು ಯಾರೇ ಸಂಪರ್ಕ ಮಾಡಿದರೂ ಹೋಗೋದಿಲ್ಲ. ನಮ್ಮಲ್ಲಿ ಒಗ್ಗಟ್ಟಿದೆ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ಮುಡಾದಲ್ಲಿ ಹಗರಣ ನಡೆದಿರುವುದು ಸಾವಿರದಷ್ಟು ನಿಜ. ಸಿಎಂ ಕುಟುಂಬ ನ್ಯಾಯಯುತವಾಗಿದ್ದು, ಆರೋಪ ಮಾಡುತ್ತಿರುವವರಿಂದಲೇ ಹೆಚ್ಚಿನ ಭ್ರಷ್ಟಾಚಾರ ಆಗಿದೆ. ಈ ಬಗ್ಗೆ ದಾಖಲೆ ಸಂಗ್ರಹಿಸುತ್ತಿದ್ದು, ಇದೆಲ್ಲವನ್ನೂ ದೇಸಾಯಿ ಆಯೋಗ, ಲೋಕಾಯುಕ್ತ ಹಾಗೂ ಮಾಧ್ಯಮಗಳಿಗೂ ಶೀಘ್ರವೇ ನೀಡುವುದಾಗಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.
ಆದರೆ ಸಿಎಂ ಪ್ರಕರಣದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ. ಕಾನೂನು ಪ್ರಕಾರ ನಿವೇಶನ ನೀಡಿದ್ದಾರೆ. ಆದರೆ ನಿಜಕ್ಕೂ ಮುಡಾದಲ್ಲಿ ಹಗರಣ ಮಾಡಿರುವವರು ಯಾರು? ಎಂಬ ಮಾಹಿತಿ ಕಲೆ ಹಾಕುತ್ತಿದ್ದು, ಶೀಘ್ರದಲ್ಲೇ ದಾಖಲೆಯ ಪಟ್ಟಿ ಬಿಡುಗಡೆ ಮಾಡಲಾಗುವುದು. ಲೋಕಾಯುಕ್ತಕ್ಕೂ ದೂರು ನೀಡುತ್ತೇನೆ. ಜತೆಗೆ ಸರ್ಕಾರ ರಚಿಸಿರುವ ದೇಸಾಯಿ ಆಯೋಗಕ್ಕೂ ಮಾಹಿತಿ ನೀಡುತ್ತೇನೆ ಎಂದರು.
ಎಂಎಲ್ಸಿ ಎಚ್.ವಿಶ್ವನಾಥ್ ಹಿರಿಯರು ಎಂಬ ಕಾರಣಕ್ಕೆ ಸುಮ್ಮನಾಗಿದ್ದೇನೆ. ಇಲ್ಲವಾದರೆ ಅವರ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ದಾಖಲಿಸುತ್ತಿದ್ದೆ. ಸಾಮಾಜಿಕ ಕಾರ್ಯಕರ್ತ ಹೇಳಿರುವಂತೆ ಮುಡಾದಲ್ಲಿ ನಾನಾಗಲಿ ಮತ್ತು ನನ್ನ ಕುಟುಂಬದವರಾಗಿ ಒಂದು ನಿವೇಶನ ಪಡೆದಿದ್ದರೆ ಅಥವಾ ಹಣಕಾಸಿನ ಲಾಭ ಪಡೆದಿದ್ದರೂ ಸಾರ್ವಜನಿಕ ಜೀವನದಿಂದಲೇ ದೂರ ಉಳಿಯುತ್ತೇನೆ ಎಂದರು.