health center 
ಜಿಲ್ಲೆ

ಆರೋಗ್ಯ ಕೇಂದ್ರಕ್ಕಿಲ್ಲ ಮೂಲ ಸೌಕರ್ಯ

Udupi

ಕೋಟ: ಇಲ್ಲಿನ ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಕರ್ಯದ ಕೊರತೆಯಿಂದ ಜನಸಾಮಾನ್ಯರು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಪ್ರಸ್ತುತ ಈ ಸಮುದಾಯ ಹೆರಿಗೆ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ದಾಖಲಾಗುತ್ತಿದ್ದಾರೆ. ಆದರೆ ಡಿಜಿಟಲ್ ಎಕ್ಸ್‌ರೇ ಮತ್ತಿತರ ಆಧುನಿಕ ಸಾಧನಗಳಿಲ್ಲದೆ ತೊಂದರೆಯಾಗುತ್ತಿದೆ.

ಆರೋಗ್ಯ ಕೇಂದ್ರದಲ್ಲಿ ಡಿಜಿಟಲ್ ಎಕ್ಸರೇ ಮತ್ತು ಕ್ಷಕಿರಣ 500 ಎಂ.ಎ. ಯಂತ್ರ ಹಾಗೂ ಡಯಾಲಿಸಿಸ್ ಘಟಕ ಶೀಘ್ರ ಸ್ಥಾಪನೆ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದು, ನಾಲ್ಕೈದು ತಿಂಗಳು ಕಳೆದರೂ ಈ ಯಂತ್ರಗಳು ಆಸ್ಪತ್ರೆಗೆ ಬಂದಿಲ್ಲ.

ಗ್ರಾಮೀಣ ಭಾಗದ ಜನರಿಗೆ ಪ್ರತಿಯೊಂದು ಸೌಲಭ್ಯ ಪಡೆಯಲು ಈ ಹಿಂದೆ ದೂರದ ಜಿಲ್ಲಾಸ್ಪತ್ರೆಗೆ ಹೋಗುವ ಪರಿಸ್ಥಿತಿಯಿತ್ತು. ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮಾರ್ಪಾಡು ಬಳಿಕ ಉತ್ತಮ ಚಿಕಿತ್ಸೆ ಪಡೆಯುವಂತಾದರೂ ಮೂಲ ಸೌಕರ್ಯದ ಕೊರತೆಯಿಂದ ಮತ್ತೆ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ಅವಲಂಬಿಸುವಂತಾಗಿದೆ.

ಸಮುದಾಯ ಆರೋಗ್ಯ ಕೇಂದ್ರವನ್ನು ಇತರ ಚಿಕಿತ್ಸೆಗಳೊಂದಿಗೆ ಹೆರಿಗೆ ಆಸ್ಪತ್ರೆಯಾಗಿ ಪರಿವರ್ತಿಸಲಾಗಿತ್ತು. ಇತ್ತೀಚೆಗೆ ಕರೊನಾ ಕಾರಣದಿಂದ ಕುಂದಾಪುರದಲ್ಲಿದ್ದ ಹೆರಿಗೆ ಆಸ್ಪತ್ರೆಯನ್ನೂ ಇಲ್ಲಿಗೆ ಸ್ಥಳಾಂತರಿಸಲಾಯಿತು. ಈಗ ರಾಜ್ಯದ ಇತರೆ ಕಡೆಗಳಿಂದ ಹೆರಿಗೆಗಾಗಿ ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದಾರೆ. ಇದು ಗ್ರಾಮೀಣ ಭಾಗದ ಆಸ್ಪತ್ರೆಯೊಂದರ ಹೆಗ್ಗಳಿಕೆಗೂ ಕಾರಣವಾಗಿದೆ. ಆದ್ದರಿಂದ ಶೀಘ್ರಗತಿಯಲ್ಲಿ ಮೂಲ ಸೌಕರ್ಯ ಆಗಬೇಕಿದೆ.

ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಅಧಿಕವಾಗಿರುತ್ತದೆ. ಪ್ರಸ್ತುತ ನುರಿತ ಕ್ಷ - ಕಿರಣ ತಂತ್ರಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದು, ನೂತನ ತಂತ್ರಜ್ಞಾನವಾದ ಡಿಜಿಟಲ್ ಎಕ್ಸರೇ ಮತ್ತು 500 ಎಂ.ಎ. ಕ್ಷ -ಕಿರಣ ಯಂತ್ರ ಬಂದರೆ ಗ್ರಾಮೀಣ ಪರಿಸರದ ಜನರಿಗೆ ಉಪಯೋಗವಾಗುತ್ತದೆ. ಈ ಕುರಿತಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸರ್ಕಾರದ ಆರೋಗ್ಯ ಸಚಿವರಿಗೆ ಲಿಖಿತ ಮನವಿ ನೀಡಲಾಗಿದೆ. ಡಾ.ವಿಶ್ವನಾಥ ವೈದ್ಯಾಧಿಕಾರಿ, ಕೋಟ ಸಮುದಾಯ ಆರೋಗ್ಯ ಕೇಂದ್ರ ಹೆರಿಗೆ ವಿಭಾಗಕ್ಕೆ ಬೇಕಾಗಿರುವ ಸಲಕರಣೆ ಈಗಾಗಲೇ ನೀಡಲಾಗಿದ್ದು, ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಅತಿಯಾಗಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಎಕ್ಸರೇ ಕ್ಷಕಿರಣ ಯಂತ್ರ ಕೂಡಲೇ ಕಾರ್ಯಾಚರಿಸಿದರೆ ಎಲ್ಲ ತರಹದ ರೋಗಿಗಳಿಗೂ ಅನುಕೂಲವಾಗುತ್ತದೆ. ಆನಂದ್ ಸಿ. ಕುಂದರ್ ಸಮಾಜಸೇವಕರು ಕೋಟ