ಜಿಲ್ಲೆ

ಬೇಡ ಮತ್ತೊಂದು ವಾಣಿಜ್ಯ ಬಂದರು

ವೀರೇಶ ಸೌದ್ರಿ

ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕಾದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕಾಗಿ ಹುನ್ನಾರ ನಡೆಯುತ್ತಿದ್ದು, ಇದರಿಂದ ಮೀನುಗಾರರಿಗೆ ಅನ್ಯಾಯ ಆಗುತ್ತಿದೆ. ಇದನ್ನು ಕಾಸರಕೋಡ ಭಾಗದ ಜನ ಮಾತ್ರವಲ್ಲ, ಜನಪರ ಕಾಳಜಿ ಇರುವ ಕರ್ನಾಟಕದ ಎಲ್ಲರೂ ವಿರೋಧೀಸಬೇಕು ಎಂದು ಚಿತ್ರನಟ ಚೇತನ್ ಹೇಳಿದರು.

ಕಾಸರಕೋಡ ಟೊಂಕಾದಲ್ಲಿ ಮೀನುಗಾರರೊಂದಿಗೆ ಗುರುವಾರ ಮಾತುಕತೆ ನಡೆಸಿ ಬಂದರು ಯೋಜನೆ ಅನುಷ್ಠಾನದಿಂದಾಗುವ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವಾಣಿಜ್ಯ ಬಂದರು ನಿರ್ಮಾಣದಿಂದ ಆರು ಸಾವಿರ ಜನರ ಬದುಕು ಮತ್ತು ಮೀನುಗಾರಿಕೆ ನಾಶವಾಗುತ್ತದೆ ಎಂದು ಪರಿಸರವಾದಿಗಳು, ಜನಪರ ಕಾಳಜಿ ಇದ್ದವರು ಹಾಗೂ ಇಲ್ಲಿನ ಜನರು ಇದನ್ನು ವಿರೋಧಿಸುತ್ತಿದ್ದಾರೆ. ಇಲ್ಲಿ ವಿಶೇಷವಾದ ಆಲೀವ್ ರಿಡ್ಲೆ ಆಮೆ ಸಂತತಿ ಇದೆ. ಅದರ ಸಂತತಿಗೂ ಹಾನಿಯಾಗಲಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಈಗಾಗಲೇ ಬೇಲೆಕೇರಿ, ಕಾರವಾರ ಬಂದರು ಇದೆ. ಆದರೂ ಮತ್ತೊಂದು ವಾಣಿಜ್ಯ ಬಂದರು ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ ಎಂದರು.

ಖಾಸಗಿಯವರ ಸಹಭಾಗಿತ್ವದಲ್ಲಿ ಹೊನ್ನಾವರದಲ್ಲಿ ಪೋರ್ಟ್ ನಿರ್ಮಿಸಿ ಇಲ್ಲಿನ ಜನಜೀವನ ನಾಶ ಮಾಡಿ ಶ್ರೀಮಂತರ ಜೇಬು ತುಂಬಿಸುವ ಕೆಲಸ ಆಗುತ್ತಿದೆ. ಇಲ್ಲಿನ ಮಹಿಳೆಯರು ಸೇರಿ ಹೋರಾಟಗಾರರ ಮೇಲೆ ಸುಳ್ಳು ಕೇಸು ದಾಖಲಿಸಿ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಇವರೆಲ್ಲ ಜನಪರವಾಗಿ ಹೋರಾಟ ಮಾಡಿದವರು. ಅವರ ಬದುಕಿಗಾಗಿ ಸಂವಿಧಾನಾತ್ಮಕ ಹಕ್ಕು ಚಲಾಯಿಸಿದ್ದಾರೆ. ಇಲ್ಲಿಯ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ದೌರ್ಜನ್ಯ ಎಸಗುತ್ತಿದ್ದಾರೆ. ಈ ಯೋಜನೆಯನ್ನು ಕೈಬಿಡಬೇಕು. ಸರ್ಕಾರಕ್ಕೆ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸ್ಥಳ ಪರಿಶೀಲನೆಗೆ ಬಂದಿದ್ದೇನೆ. ನಾನೂ ಕೂಡ ಈ ಹೋರಾಟಕ್ಕೆ ಬೆಂಬಲಿಸಿ ಇಲ್ಲಿನ ಜನರಪರವಾಗಿ ನಿಲ್ಲುತ್ತೇನೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದರು.

ಮೀನುಗಾರ ಮುಖಂಡರಾದ ಗಣಪತಿ ತಾಂಡೇಲ್, ರಾಜೇಶ್ ತಾಂಡೇಲ್, ರಾಜು ತಾಂಡೇಲ್ ಹಾಗೂ ಮೀನುಗಾರರು ಇದ್ದರು.