ಜಿಲ್ಲೆ

ಮನೆ ಬಾಗಿಲಿಗೆ ಮದ್ಯ ಬೇಡ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಒತ್ತಾಯ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಮನೆಬಾಗಿಲಿಗೆ ಮದ್ಯ ಪೂರೈಸುವ ಮನೆಹಾಳು ನಿರ್ಧಾರ ಹಿಂಪಡೆಯಬೇಕು ಎಂದು ಸರ್ಕಾರವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಸಂಪನ್ಮೂಲ ಸಂಗ್ರಹಣೆಯಲ್ಲಿ ಮುಗ್ಗರಿಸಿರುವ ಅಬಕಾರಿ ಇಲಾಖೆ ಆನ್​ಲೈನ್ ಮೂಲಕ ‘ಮನೆ ಬಾಗಿಲಿಗೆ ಮದ್ಯ’ ಪೂರೈಸುವ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಎಂಎಸ್​ಐಎಲ್ ಮದ್ಯದಂಗಡಿ ತೆರೆಯುವ ಪ್ರಸ್ತಾವನೆ ಅಥವಾ ಚಿಂತನೆ ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ. ಆನ್​ಲೈನ್ ಮೂಲಕ ಮದ್ಯ ಪೂರೈಸುವ ಸಂಬಂಧ ಖಾಸಗಿ ಕಂಪನಿ ಜತೆ ಮಾತುಕತೆ ಹಾಗೂ ಅಬಕಾರಿ ಆಯುಕ್ತರು ಈ ಬಗ್ಗೆ ಒಲವು ಹೊಂದಿರುವುದು ನನ್ನ ಗಮನಕ್ಕೆ ಬಂದಿದೆ. ಲಾಕ್​ಡೌನ್​ನಿಂದಾಗಿ ಜನತೆ ಆದಾಯ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೈನಂದಿನ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಮನೆ ಬಾಗಿಲಿಗೆ ಮದ್ಯ ಪೂರೈಸುವ ಮನೆಹಾಳು ನಿರ್ಧಾರ ಕೈಬಿಡಬೇಕು ಎಂದಿದ್ದಾರೆ.

ಕರೊನಾ ಸಂಕಷ್ಟದಲ್ಲಿ ವೇತನವಿಲ್ಲದೆ ಕಂಗೆಟ್ಟಿರುವ ರಾಜ್ಯದ ಸುಮಾರು 2.5 ಲಕ್ಷ ಖಾಸಗಿ ಶಾಲಾ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ನೆರವಿಗೆ ಸರ್ಕಾರ ತಕ್ಷಣವೇ ಮುಂದಾಗಬೇಕು. ವಿದ್ಯಾರ್ಥಿಗಳು ಶುಲ್ಕ ಕಟ್ಟುತ್ತಿಲ್ಲ ಎಂಬ ಕಾರಣ ಹೇಳಿ ಶಿಕ್ಷಕರನ್ನು ಕೆಲಸದಿಂದ ತೆಗೆಯಲು ಆಡಳಿತ ಮಂಡಳಿಗಳು ಮುಂದಾಗುತ್ತಿರುವುದನ್ನು ತಪ್ಪಿಸಲು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. | ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ