ಜಿಲ್ಲೆ

ಎನ್‌ಎಂಪಿಟಿಗೆ ಹೊಸ ವರ್ಷದ ಮೊದಲ ಕ್ರೂಸ್ ಹಡಗು ಆಗಮನ

ಹರೀಶ ಎಂ.

ಮಂಗಳೂರು : ನವಮಂಗಳೂರು ಬಂದರಿಗೆ ಈ ವರ್ಷದ ಮೊದಲ ಕ್ರೂಸ್ ಹಡಗು ಆಗಮಿಸಿದೆ. ಎಂ.ಎಸ್. ರಿವೀರಿಯ ಹೆಸರಿನ ಕ್ರೂಸ್ ಹಡಗು ಬುಧವಾರ ಎನ್‌ಎಂಪಿಟಿಗೆ ಆಗಮಿಸಿದ್ದು, ಹಡಗಿನಲ್ಲಿ ಬಂದ ವಿದೇಶಿ ಪ್ರವಾಸಿಗರು ಮಂಗಳೂರು ಸುತ್ತಾಡಿದ್ದಾರೆ. ಈ ಸಾಲಿನಲ್ಲಿ ಬಂದ ನಾಲ್ಕನೇ ಪ್ರವಾಸಿ ಹಡಗು ಇದಾಗಿದೆ.


ಹಡಗಿನಲ್ಲಿ ಸಿಬಂದಿ ಸೇರಿ ಒಟ್ಟು 980 ಪ್ರವಾಸಿಗರಿದ್ದರು. ದುಬೈ, ಮುಂಬೈ, ಮರ್ಮಗೋವಾ ಬಂದರಿನ ಮೂಲಕ ಮಂಗಳೂರಿಗೆ ಆಗಮಿಸಿದ್ದು, ಐಷಾರಾಮಿ ಹಡಗು 239 ಮೀಟರ್ ಉದ್ದವಾಗಿದೆ. 66,172 ಟನ್‌ಗೂ ಅಧಿಕ ಭಾರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹಡಗಿನಲ್ಲಿ ಬಂದ ಪ್ರವಾಸಿಗರಿಗೆ ಮಂಗಳೂರಿನ ಬಂದರಿಗೆ ಕಾಲಿಡುತ್ತಿದ್ದಂತೆ ಕರಾವಳಿಯ ಸಾಂಪ್ರದಾಯಿಕ ಕಲೆ ಯಕ್ಷಗಾನ ಮೂಲಕ ಸ್ವಾಗತ ನೀಡಲಾಯಿತು. ವಿವಿಧ ರೀತಿಯ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಏರ್ಪಡಿಸಲಾಗಿತ್ತು.


ಪ್ರವಾಸಿಗರನ್ನು ಮಂಗಳೂರು ಸುತ್ತಮುತ್ತ ಸುತ್ತಾಡಿಸಲು ಟ್ಯಾಕ್ಸಿ, ಬಸ್, ಕಾರುಗಳ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಆಯುಷ್ ಮೆಡಿಟೇಶನ್ ಸೆಂಟರ್, ಎನ್‌ಎಂಪಿಟಿ ಬಂದರಿನಲ್ಲಿ ಫ್ರೀ ವೈಫೈ, ಯಕ್ಷಗಾನ ಕಲಾವಿದರ ಜೊತೆಗೆ ಫೋಟೋ ಕ್ಲಿಕ್ಕಿಸಲು ಸೆಲ್ಸಿ ಸ್ಟಾಂಡ್ ಒದಗಿಸಲಾಗಿತ್ತು. ಹಡಗಿನ ಪ್ರಮುಖ ಅಧಿಕಾರಿಗಳನ್ನು ಎನ್‌ಎಂಪಿಎ ಬಂದರಿನ ಡೆಪ್ಯುಟಿ ಚೇರ್ಮನ್ ಕೆ.ಜಿ. ನಾಥ್, ಸೆಕ್ರಟರಿ ಜಿಜೋ ಥಾಮಸ್ ಗೌರವಿಸಿದರು. ಆಬಳಿಕ ಪ್ರವಾಸಿಗರಿಗೆಂದೇ ಮಂಗಳೂರಿನ ಸ್ಥಳೀಯ ಕಲಾವಿದರ ತಂಡದಿಂದ ಯಕ್ಷಗಾನ ಏರ್ಪಡಿಸಲಾಗಿತ್ತು.


ಮಂಗಳೂರಿನಲ್ಲಿ ಕಾರ್ಕಳ ಗೊಮ್ಮಟೇಶ್ವರ, ಮೂಡುಬಿದಿರೆ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಅಚಲ್ ಕ್ಯಾಶ್ಯು ಫ್ಯಾಕ್ಟರಿ, ಸೈಂಟ್ ಅಲೋಸಿಯಸ್ ಚರ್ಚ್, ಹಳೇ ಶೈಲಿಯ ಮನೆಗಳಿಗೆ ಪ್ರವಾಸಿಗರು ಭೇಟಿ ನೀಡಿದ್ದು, ಸಂಜೆಯ ವೇಳೆಗೆ ಹಡಗು ಕೊಚ್ಚಿ ಬಂದರಿನತ್ತ ತೆರಳಿತು.