ಪ್ರಮುಖ ಮುಖ್ಯಾಂಶಗಳು
ತಮಿಳುನಾಡಿನ ಮತ್ತೊಬ್ಬ ಸರ್ಫರ್ ಕಿಶೋರ್ ಕುಮಾರ್ ಪುರುಷರ ಓಪನ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪ್ರದೀಪ್ ಪೂಜಾರಿ ಸರ್ಫಿಂಗ್ ಜೂನಿಯರ್ಸ್ ಅಂಡರ್-18 ಬಾಲಕರ ವಿಭಾಗದಲ್ಲಿ ಕರ್ನಾಟಕಕ್ಕೆ ಏಕೈಕ ಪ್ರಶಸ್ತಿಯನ್ನು ತಂದುಕೊಟ್ಟರು. ಹೊಸದಾಗಿ ಪರಿಚಯಿಸಲಾದ ಅಂಡರ್ -14 ಬಾಲಕರ (ಗ್ರೋಮ್ಸ್) ಮತ್ತು ಅಂಡರ್ -14 ಬಾಲಕಿಯರ (ಗ್ರೋಮ್ಸ್) ವಿಭಾಗಗಳಲ್ಲಿ ಹರೀಶ್ ಪಿ ಮತ್ತು ಧಮಯಂತಿ ಶ್ರೀರಾಮ್ ಜಯಶಾಲಿಯಾದರು. ವಿಜೇತರಿಗೆ ನಗದು ಬಹುಮಾನ, ಪ್ರಮಾಣಪತ್ರ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಈ ಚಾಂಪಿಯನ್‌ಶಿಪ್ ಅನ್ನು ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ, ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಬೆಂಬಲದೊಂದಿಗೆ ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸಿದ್ದವು. ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA) ಪ್ರಾಯೋಜಕತ್ವ ನೀಡಿತ್ತು.
ಮಹಿಳೆಯರ ಓಪನ್ ವಿಭಾಗ
ಕಮಾಲಿ ಮೂರ್ತಿ ಮಹಿಳೆಯರ ಓಪನ್ ವಿಭಾಗದಲ್ಲಿ 13.17 ಸ್ಕೋರ್ ಗಳಿಸಿ ಅಗ್ರಸ್ಥಾನ ಪಡೆದರು. ಸುಗರ್ ಶಾಂತಿ ಬನಾರಸೆ 11.73 ಅಂಕ ಪಡೆದು 2ನೇ ಸ್ಥಾನ ಪಡೆದರೆ, ಸೃಷ್ಟಿ ಸೆಲ್ವಂ 8.50 ಸ್ಕೋರ್‌ನೊಂದಿಗೆ 3ನೇ ಸ್ಥಾನ ಪಡೆದರು.
ಪುರುಷರ ಓಪನ್ ವಿಭಾಗ
ತಮಿಳುನಾಡಿನ ಕಿಶೋರ್ ಕುಮಾರ್ 15.20 ಸ್ಕೋರ್‌ನೊಂದಿಗೆ ಪುರುಷರ ಓಪನ್ ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ರಮೇಶ್ ಬುಧಿಹಾಳ್ (12.87), ಶಿವರಾಜ್ ಬಾಬು (11.90) ಮತ್ತು ಶ್ರೀಕಾಂತ್ ಡಿ (9.93) ಕ್ರಮವಾಗಿ ನಂತರದ ಪ್ರಶಸ್ತಿ ಪಡೆದರು.
ಜೂನಿಯರ್ಸ್ ಅಂಡರ್-18 ಬಾಲಕರ ವಿಭಾಗ
ಕರ್ನಾಟಕದ ಪ್ರದೀಪ್ ಪೂಜಾರಿ 12.17 ಅಂಕ ಪಡೆದು ಅದ್ಭುತ ಪ್ರದರ್ಶನ ನೀಡಿ ಸರ್ಫಿಂಗ್ ಜೂನಿಯರ್ಸ್ 18 ವರ್ಷದೊಳಗಿನ ಬಾಲಕರ ಕಿರೀಟವನ್ನು ಮುಡಿಗೇರಿಸಿಕೊಂಡರು. ತಮಿಳುನಾಡಿನ ತಾಯಿನ್ ಅರುಣ್ 11.26 ಅಂಕದೊಂದಿಗೆ 2ನೇ ಸ್ಥಾನ ಪಡೆದರೆ, ಪ್ರಹ್ಲಾದ್ ಶ್ರೀರಾಮ್ 9.50 ಸ್ಕೋರ್‌ನೊಂದಿಗೆ 3ನೇ ಸ್ಥಾನ ಪಡೆದರು.
ಜೂನಿಯರ್ಸ್ ಅಂಡರ್-18 ಬಾಲಕಿಯರ ವಿಭಾಗ
ಮಹಿಳೆಯರ ಓಪನ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕಮಾಲಿ ಮೂರ್ತಿ ಸರ್ಫಿಂಗ್ ಜೂನಿಯರ್ಸ್ ಅಂಡರ್ 18 ಬಾಲಕಿಯರ ಫೈನಲ್‌ನಲ್ಲಿ ಭರ್ಜರಿ ಜಯ ಸಾಧಿಸಿದರು. ಕಮಾಲಿ 14.83 ಸ್ಕೋರ್ ದಾಖಲಿಸಿದರು. ಕರ್ನಾಟಕದ ಸಾನ್ವಿ ಹೆಗಡೆ ಕೇವಲ 5.67 ಅಂಕಗಳೊಂದಿಗೆ 2ನೇ ಸ್ಥಾನ ಪಡೆದರೆ, ಆದ್ಯಾ ಸಿಂಗ್ 2.73 ಸ್ಕೋರ್‌ನೊಂದಿಗೆ 3ನೇ ಸ್ಥಾನ ಪಡೆದರು.
ಅಂಡರ್-14 ಬಾಲಕ ಮತ್ತು ಬಾಲಕಿಯರ (ಗ್ರೋಮ್ಸ್) ವಿಭಾಗಗಳು
ಹೊಸದಾಗಿ ಪರಿಚಯಿಸಲಾದ ಸರ್ಫಿಂಗ್ ಜೂನಿಯರ್ಸ್ ಅಂಡರ್-14 ಬಾಲಕರ (ಗ್ರೋಮ್ಸ್) ಮತ್ತು ಅಂಡರ್-14 ಬಾಲಕಿಯರ (ಗ್ರೋಮ್ಸ್) ವಿಭಾಗಗಳು ಭಾರತದ ಉದಯೋನ್ಮುಖ ಸರ್ಫಿಂಗ್ ಪ್ರತಿಭೆಯನ್ನು ಪ್ರದರ್ಶಿಸಿದವು. ಬಾಲಕರ ವಿಭಾಗದಲ್ಲಿ ಹರೀಶ್ ಪಿ 17.23 ಅಂಕಗಳೊಂದಿಗೆ ಫೈನಲ್‌ನಲ್ಲಿ ಪ್ರಾಬಲ್ಯ ಸಾಧಿಸಿ, ಶೇಖ್ ದಾವೂದ್ ಎಸ್ (12.97) ಮತ್ತು ಪ್ರಹ್ಲಾದ್ ಶ್ರೀರಾಮ್ (8.40) ಅವರಿಗಿಂತ ಸುಲಭವಾಗಿ ಮುನ್ನಡೆದು ಪ್ರಥಮ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಧಮಯಂತಿ ಶ್ರೀರಾಮ್ 10.50 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ನಂತರದ ಸ್ಥಾನಗಳನ್ನು ಅರಬೋಲು ನೇತ್ರಾ (8.13) ಮತ್ತು ಸಾನ್ವಿತಾ ಕುಂದರ್ (5.54) ಪಡೆದರು.