ಶ್ರವಣ್ ಕುಮಾರ್ ನಾಳ ಮಂಗಳೂರು
ಪಶ್ವಿಮ ಕರಾವಳಿಯಲ್ಲೇ ಅತಿಹೆಚ್ಚು ಎಲ್‌ಪಿಜಿ ನಿರ್ವಹಣೆಯ ಹಾಗೂ ಕಾಫಿ, ಅದಿರು ರಫ್ತು ಮಾಡುವ ನವಮಂಗಳೂರು ಬಂದರುವಿನಲ್ಲಿ ಟಗ್ ಕೊರತೆ ಎದುರಾಗಿದೆ.
ಎನ್‌ಎಂಪಿಎಯಲ್ಲಿ ಹಡಗುಗಳ ಸುಗಮ ಸಂಚಾರ-ನಿರ್ವಹಣೆಗೆ ಅಗತ್ಯವಿರುವ ಮೂರು ಟಗ್ ಅಷ್ಟೇ ಇವೆ. ತಿಂಗಳಿಗೆ 150ರಷ್ಟು ಹಡಗುಗಳು ಆಗಮಿಸುವ ಎನ್‌ಎಂಪಿಎಯಲ್ಲಿ ಕನಿಷ್ಠ 5-6 ಟಗ್ ಅಗತ್ಯ. ಕಡಲಾಳದಲ್ಲಿ ಎಂಆರ್‌ಪಿಎಲ್‌ನ ಜೆಟ್ಟಿ ಸ್ವರೂಪದ ‘ಎಸ್‌ಪಿಎಂ’ನ ಕಚ್ಚಾತೈಲ ಹೊತ್ತು ತರುವ ಹಡಗು ನಿರ್ವಹಣೆಗೆ ಕನಿಷ್ಠ ಒಂದು ಟಗ್ ಬೇಕು. ಇದನ್ನು ಹೊರತುಪಡಿಸಿ ಉಳಿಯುವುದು ಎರಡು. ಇವು ಎನ್‌ಎಂಪಿಎ ಪರಿಧಿಗೆ ಲಭ್ಯವಾಗುತ್ತಿದೆ. ಇವೆರಡನ್ನು 16 ಬರ್ತ್‌ಗೆ ಮೀಸಲಿರಿಸಿರುವ ಕಾರಣ ಹಡಗುಗಳಿಗೆ ಸಮಯಕ್ಕೆ ಸರಿಯಾಗಿ ಟಗ್ ಸಿಗದೆ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ. ಕೆಲವೊಂದು ಹಡಗನ್ನು ಎನ್‌ಎಂಪಿಎ ‘ಬರ್ತ್’ನ ಒಳಗೆ ತಂದು ನಿಲ್ಲಿಸಲು 3-4 ಟಗ್ ಬೇಕಾಗುತ್ತವೆ. ಇದಕ್ಕೆ ಕೆಲವು ಸಮಯ ಬೇಕು. ಒಂದು ಹಡಗಿನ ನಿರ್ವಹಣೆಗೆ ಸಮಯ ಮೀಸಲಿರಿಸಿದರೆ ಉಳಿದ ಹಡಗು ನಿರ್ವಹಣೆ ಬಾಕಿಯಾಗುವ ಪ್ರಮೇಯ ಅಧಿಕ. ಹೀಗಾಗಿ ಕೆಲವು ಹಡಗು ಆಗಮನ-ನಿರ್ಗಮನದ ಸಮಯದಲ್ಲಿ ವ್ಯತ್ಯಯವಾಗುತ್ತಿದೆ.
ಹಡಗು ಆಗಮನ-ನಿರ್ಗಮನ ವ್ಯತ್ಯಾಸ
ಹಡಗುಗಳನ್ನು ಬಂದರಿನ ಒಳಗೆ ತರಲು ಹಾಲಿ ಟಗ್ ಸಾಕಾಗುವುದಿಲ್ಲ. ಜತೆಗೆ ‘ಆ್ಯಂಕರೇಜ್’ (ಬಂದರಿನ ಹೊರವಲಯದಲ್ಲಿ ಹಡಗು ಪ್ರವೇಶಕ್ಕೆ ಕಾಯುವ ಸ್ಥಳ) ಆಗುವ ಹಡಗುಗಳಿಗೆ ಶಿಪ್ಪಿಂಗ್ ಏಜೆನ್ಸಿಯವರಿಂದ ಯಾವುದಾದರೂ ವಸ್ತುಗಳನ್ನು ಕೊಂಡೊಯ್ಯಲು ಟಗ್ ಸಿಗುತ್ತಿಲ್ಲ. ಇವೆಲ್ಲದರ ಪರಿಣಾಮ ಹಡಗು ಆಗಮನ-ನಿರ್ಗಮನದ ಸಮಯದಲ್ಲಿ ವ್ಯತ್ಯಾಸವಾಗುತ್ತಿದೆ.
ಪ್ಯಾಸೆಂಜರ್ ಹಡಗಿಗೆ ಬೇಕಿಲ್ಲ
ಪ್ಯಾಸೆಂಜರ್ ಹಡಗು ಸಹಿತ ಕೆಲವು ಸೀಮಿತ ಹಡಗುಗಳಿಗೆ ಟಗ್ ಅಗತ್ಯ ಇಲ್ಲ. ಉಳಿದ ಹಡಗುಗಳ ಆಗಮನ-ನಿರ್ಗಮನ ವೇಳೆಯಲ್ಲಿ ವ್ಯಾಪ್ತಿಯಲ್ಲಿ ಟಗ್ ಅಗತ್ಯ. ತೈಲಗಳು, ಕಬ್ಬಿಣದ ಅದಿರು ಉಂಡೆಗಳು, ಕಂಟೇನರ್‌ಕೃತ ಕಾರ್ಗೋಗಳು ಬಂದರಿನಿಂದ ರ್ತು ಆಗುವ ಪ್ರಮುಖ ಉತ್ಪನ್ನಗಳು. ಕಚ್ಚಾತೈಲಗಳು, ಸಿಮೆಂಟ್, ಕಲ್ಲಿದ್ದಲು, ರಸಗೊಬ್ಬರ, ಖಾದ್ಯ ತೈಲಗಳು, ಲಿಕ್ವಿಡ್ ರಾಸಾಯನಿಕಗಳು, ಕಂಟೇನರ್‌ಕೃತ ಕಾರ್ಗೋಗಳು ಪ್ರಮುಖ ಆಮದುಗಳು. ಎಂಆರ್‌ಪಿಎಲ್, ಒಎನ್‌ಜಿಸಿ, ಒಎಂಪಿಎಲ್, ಕೆಐಒಸಿಎಲ್, ಟೋಟಲ್ ಗ್ಯಾಸ್, ಎಂಸಿಎ್, ಎಚ್‌ಪಿಸಿಎಲ್, ಐಒಸಿ, ಯುಪಿಸಿಎಲ್ ಸೇರಿದಂತೆ ಪ್ರಮುಖ ಉದ್ದಿಮೆಗಳಿಗೆ ಕಾರ್ಗೋಗಳನ್ನು ಹಡಗುಗಳ ಮೂಲಕ ಇಲ್ಲಿ ನಿರ್ವಹಿಸಲಾಗುತ್ತಿದೆ. ಈ ಎಲ್ಲ ಹಡಗುಗಳ ಆಗಮನ-ನಿರ್ಗಮನಕ್ಕೆ ಹಾಲಿ ಇರುವ ಟಗ್ ಸಾಕಾಗುವುದಿಲ್ಲ ಎಂಬುವುದು ಸ್ಟೀಮರ್ ಏಜೆಂಟ್‌ಗಳ ಹೇಳಿಕೆ.
ಸಮಸ್ಯೆ ಆಗದಂತೆ ಎನ್‌ಎಂಪಿಎ ನಿರ್ವಹಣೆ
ದೇಶದ ವಿವಿಧ ಬಂದರುಗಳಿಗಿಂತ ಮಂಗಳೂರಿನಲ್ಲಿ ಇತ್ತೀಚೆಗೆ ರಪ್ತು-ಆಮದು ಪ್ರಮಾಣ ಹೆಚ್ಚಿದೆ. ಇದರಿಂದ ಹೆಚ್ಚುವರಿ ಟಗ್ ಅಗತ್ಯ ಎಂಬುದು ಸ್ಟೀಮರ್ ಏಜೆಂಟ್‌ಗಳ ಬೇಡಿಕೆ. ಆದರೆ ಎನ್‌ಎಂಪಿಎ ಅಧಿಕಾರಿಗಳ ಪ್ರಕಾರ ಟಗ್ ಕೊರತೆ ಇಲ್ಲ. ಹಿಂದಿನಂತೆ ಟಗ್‌ಗಳು ಇವೆ. ಅದರ ನಿರ್ವಹಣೆಯೂ ನಡೆಯುತ್ತಿದೆ. ಟಗ್ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಎನ್‌ಎಂಪಿಎ ಅಧಿಕಾರಿಗಳು ತಿಳಿಸಿದ್ದಾರೆ.
ನವಮಂಗಳೂರು ಬಂದರು ಪ್ರಮುಖ ಕಡಲ ವ್ಯಾಪಾರ ಕೇಂದ್ರವಾಗಿ ತನ್ನ ಸ್ಥಾನವನ್ನು ಬಲಪಡಿಸುತ್ತಲೇ ಇರುವುದರಿಂದ ಅದು ತನ್ನ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲು, ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು ಮತ್ತು ತನ್ನ ಗ್ರಾಹಕರಿಗೆ ಸಾಟಿಯಿಲ್ಲದ ಸೇವೆ ಒದಗಿಸುವತ್ತ ಗಮನ ಹರಿಸಿದೆ. ನವಮಂಗಳೂರು ಬಂದರಿನಲ್ಲಿ ಟಗ್ ಲಭ್ಯವಿದೆ. ಕೊರತೆ ಎದುರಾಗಿಲ್ಲ. ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.
ಎ.ವಿ.ರಮಣ, ಅಧ್ಯಕ್ಷರು, ಎನ್‌ಎಂಪಿಎ