ಜಿಲ್ಲೆ

ಎನ್.ಕೆ.ಜಗದೀಶ್ ಬಿಜೆಪಿ ಶಿವಮೊಗ್ಗ ನೂತನ ಜಿಲ್ಲಾಧ್ಯಕ್ಷ

ಶಿವಮೊಗ್ಗ: ನಿರೀಕ್ಷೆಯಂತೆ ಬಿಜೆಪಿ ನೂತನ ಅಧ್ಯಕ್ಷರಾಗಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಜಗದೀಶ್ ಅವರ ಹೆಸರು ಘೋಷಣೆಯಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಘೋಷಣೆಯಾಗಿದ್ದ ಮಂಡಲ ಅಧ್ಯಕ್ಷರು ಅದೇ ಸ್ಥಾನದಲ್ಲಿ ಮುಂದುವರಿದಿದ್ದು, ಸೊರಬ ಮಂಡಲ ಅಧ್ಯಕ್ಷರಾಗಿ ಪ್ರಕಾಶ್ ಅಗಸನಹಳ್ಳಿ ಆಯ್ಕೆಯಾಗಿದ್ದಾರೆ.

15 ದಿನಗಳ ಹಿಂದೆ ನಡೆದಿದ್ದ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಎನ್.ಕೆ.ಜಗದೀಶ್ ಜತೆಗೆ ಇನ್ನು ಎರಡು ಹೆಸರುಗಳನ್ನು ರಾಜ್ಯಕ್ಕೆ ಕಳುಹಿಸಲಾಗಿತ್ತು. ಈಗ ಜಗದೀಶ್ ಹೆಸರು ಅಂತಿಮವಾಗಿ ಘೋಷಣೆಯಾಗಿದೆ. ಶಿವಪ್ಪನಾಯಕ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ, ಬಳಿಕ ನಗರಾಧ್ಯಕ್ಷರಾಗಿ ಕೆಲಸ ಮಾಡಿದ್ದ ಜಗದೀಶ್, ಪ್ರಸ್ತುತ ಜಿಲ್ಲಾ ಕಾರ್ಯದರ್ಶಿ ಜವಾಬ್ದಾರಿ ಹೊಂದಿದ್ದರು.

ಕಳೆದ ವರ್ಷ ಜನವರಿಯಲ್ಲಿ ವಿವಿಧ ಮಂಡಲಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಅವರನ್ನೇ ಈಗ ಮುಂದುವರಿಸಲಾಗಿದೆ. ಆ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೇಮಕ ಮಾಡಲಾಗಿತ್ತು. ಈಗ ಚುನಾವಣೆ ವ್ಯವಸ್ಥೆಯಲ್ಲಿ ಅವರನ್ನೇ ಆಯ್ಕೆ ಮಾಡಿರುವುದು ವಿಶೇಷವಾಗಿದೆ.

ಸೊರಬ ಬಣ ರಾಜಕೀಯದ ನಡುವೆ ಮಂಡಲ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಪ್ರಕಾಶ್ ತಲಕಾಲಕೊಪ್ಪ ಅವರ ಜಾಗಕ್ಕೆ ಪ್ರಕಾಶ್ ಅಗಸನಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ. ಇದೊಂದು ಬದಲಾವಣೆ ಹೊರತುಪಡಿಸಿದರೆ ಉಳಿದ 9 ಮಂಡಲಗಳ ಅಧ್ಯಕ್ಷರ ಆಯ್ಕೆಯಲ್ಲಿ ಯಾವುದೆ ಬದಲಾವಣೆಯಾಗಿಲ್ಲ. ದೀರ್ಘ ಕಾಲದಿಂದ ಸಾಗರ ನಗರ ಘಟಕದ ಅಧ್ಯಕ್ಷರಾಗಿರುವ ಕೆ.ಆರ್.ಗಣೇಶ್ ಪ್ರಸಾದ್ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಲಾಗಿದೆ.