ಬೆಂಗಳೂರು: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೈಸೂರು ಮೂಲತದ ಪರಶುರಾಮ್ (62) ಎಂಬಾತ, ಪೊಲೀಸರ ಬಿಗಿ ಭದ್ರತೆ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಗೆ ಕರಪತ್ರ ಹಿಡಿದು ನುಗ್ಗಲು ಯತ್ನಿಸಿದ ಪ್ರಸಂಗ ಶುಕ್ರವಾರ ನಡೆದಿದೆ.
ಮೈಸೂರಿನಲ್ಲಿ ಸ್ಥಳೀಯ ಪತ್ರಿಕೆ ನಡೆಸುತ್ತಿರುವ ಪರಶುರಾಮ್, ತಮ್ಮ ಪತ್ರಿಕೆ ಹೆಸರು ಹೇಳಿ ಪಾಸ್ ಪಡೆದಿದ್ದ. ಶುಕ್ರವಾರ ಮುಂಜಾನೆ ಮೈಸೂರಿನಿಂದ ಬಸ್‌ನಲ್ಲಿ ಬೆಂಗಳೂರಿಗೆ ಬಂದು ಮಣಿಕ್ ಷಾ ಮೈದಾನಕ್ಕೆ ಆಗಮಿಸಿದ್ದ. ನಂತರ, ಗೇಟ್ ಸಂಖ್ಯೆ2ರಲ್ಲಿ ಭದ್ರತಾ ಸಿಬ್ಬಂದಿಗೆ ಮಾಧ್ಯಮದ ಪಾಸ್ ತೋರಿಸಿ ಮೈದಾನದ ಒಳಗೆ ಪ್ರವೇಶ ಕೊಟ್ಟಿದ್ದ. ಮಾಧ್ಯಮ ಸಿಬ್ಬಂದಿಗೆ ನಿಗದಿಪಡಿಸಿರುವ ಜಾಗದಲ್ಲಿ ನಿಂತಿದ್ದ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿರುವ ವೇಳೆ ಮಾಧ್ಯಮದ ಗ್ಯಾಲರಿಯಿಂದ ಏಕಾಏಕಿ ಮೈದಾನಕ್ಕೆ ಓಡಿ ಹೋಗಿ ಕೈಮುಗಿದುಕೊಂಡು ಮುಖ್ಯಮಂತ್ರಿ ಸಿದ್ದರಾಮ್ಯ ಬಳಿ ತೆರಳಲು ಮುಂದಾಗಿದ್ದ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ತಕ್ಷಣ ಆತನನ್ನು ವಶಕ್ಕೆ ಪಡೆದು ಕರೆದೊಯ್ಯಲು ಮುಂದಾದರು. ಇಷ್ಟಕ್ಕೂ ಸುಮ್ಮನಾಗದ ಈತ ಪೊಲೀಸರಿಂದ ಬಿಡಿಸಿಕೊಳ್ಳಲು ಯತ್ನಿಸಿ ‘ಕೆಪಿಎಸ್‌ಸ್ಸಿಯಲ್ಲಿ ನನಗೆ ಅನ್ಯಾಯ ಆಗಿರುವುದನ್ನು ಸರಿಪಡಿಸಿ’ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರು ಥಾವರ್ ಚಂದ್ ಗೆಹಲೋತ್ ಕಡೆ ಪೋಸ್ಟರ್ ಎಸೆದು ಕಣ್ಣೀರು ಹಾಕಿದ. ಪೊಲೀಸರು ಪರಶುರಾಮ್‌ನನ್ನು ಮಣಿಕ್ ಷಾ ಮೈದಾನದಿಂದ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದರು.
ಕೆಪಿಎಸ್ಸಿ ಪರೀಕ್ಷೆ ಪರೀಕ್ಷೆ ಬರೆದಿದ್ದ: ಅವಿವಾಹಿತನಾಗಿರುವ ಪರಶುರಾಮ್ 1993ರಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದ. ಅದರಲ್ಲಿ ನನಗೆ ಅನ್ಯಾಯವಾಗಿದೆ ಸರಿಪಡಿಸಿಕೊಡಿ ಎಂಬುದಾಗಿ ಮುಂಚಿನಿಂದಲೂ ಸಭೆ-ಸಮಾರಂಭಗಳಲ್ಲಿ ಸಚಿವರು, ಗಣ್ಯರಿಗೆ ಅರ್ಜಿ ಕೊಡುತ್ತಿದ್ದ. ನನಗೆ ಅನ್ಯಾಯ ಆಗಿರುವುದನ್ನು ಸರಿಪಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಸೆಳೆಯುವ ಉದ್ದೇಶದಿಂದ ಪರಶುರಾಮ್ ಮಣಿಕ್ ಷಾ ಪರೆಡ್ ಮೈದಾನದಲ್ಲಿ ಈ ರೀತಿ ವರ್ತಿಸಿರುವುದು ತಿಳಿದುಬಂದಿದೆ. ಹಿಂದೆಯೂ ಈತ ರಾಜ್ಯದ ವಿವಿಧ ಭಾಗಗಳಲ್ಲಿ ಇದೇ ಮಾದರಿಯಲ್ಲಿ ಗಣ್ಯರು ಇರುವ ಸಮಾರಂಭಕ್ಕೆ ತೆರಳಿ ತನಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಂಡಿದ್ದ. ಪೊಲೀಸರು ಆತನನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳುಹಿಸುತ್ತಿದ್ದರು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮತ್ತೆ ತನ್ನ ಹಳೆಚಾಳಿಯನ್ನು ಮುಂದುವರಿಸಿದ್ದಾನೆ.