ಜಿಲ್ಲೆ

ಕೃಷಿಕರ ಸಮಸ್ಯೆ ಬಗೆಹರಿಸಲು ಕ್ರಮ - ಸಭೆಯಲ್ಲಿ ಪ್ರತಿಧ್ವನಿಸಿದ ‘ವಿಜಯವಾಣಿ’ ವರದಿಗಳು

ಎ. ಆರ್. ರಘುರಾಮ

ರೈತರ ಕುಂದು ಕೊರತೆ ಸಭೆ

ನಂಜನಗೂಡು : ರೈತರ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲು ತುರ್ತು ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್ ಶಿವಕುಮಾರ ಕಾಸ್ನೂರು ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ರೈತರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಕೃಷಿಕರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.ಕಳೆದ ಬಾರಿ ( 2023ರಲ್ಲಿ )ರೈತರ ಸಭೆ ಆಯೋಜನೆ ಮಾಡಲಾಗಿತ್ತು. ಆಗಲೂ ಕೃಷಿಕರ ಹಲ ವಾರು ಸಮಸ್ಯೆಗಳನ್ನು ಬಗೆಹರಿಸಲಾಗಿತ್ತು. ಇಂದಿನ ಸಭೆಯಲ್ಲಿ ಚರ್ಚಿತವಾಗಿರುವ ವಿಷಯ ಮತ್ತು ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಬೇಕು ಎಂದು ಅವರು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಕಚೇರಿಯ ಶೌಚ ಗೃಹ, ಕುಡಿಯುವ ನೀರು ವ್ಯವಸ್ಥೆ, ವಿವಿಧ ಪ್ರಮಾಣ ಪತ್ರಗಳನ್ನು ಪಡೆಯಲು ಎದುರಾಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಗ್ರಾಮ ಲೆಕ್ಕಾಧಿಕಾರಿಗಳು ನಾಡಕಚೇರಿಯಲ್ಲೇ ಇದ್ದು ಕೆಲಸ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸುತ್ತೇನೆ ಎಂದವರು ಹೇಳಿದರು.

*

ದೂರುಗಳ ಸುರಿಮಳೆ:

ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಪ್ರತಿವಾರ, ತಿಂಗಳಿಗೊಮ್ಮೆ ಸಭೆಗಳನ್ನು ನಡೆಸುತ್ತಾರೆ. ಆದರೆ ರೈತರ ಸಭೆಯನ್ನು ಮಾತ್ರ ಎರಡು ವರ್ಷಕ್ಕೆ ಒಮ್ಮೆ ನಡೆಸುತ್ತಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಇದು ಅರ್ಥಪೂರ್ಣ ಸಭೆ ಅಲ್ಲ. 2 ವರ್ಷಕ್ಕೆ ಒಮ್ಮೆ ಅಹವಾಲು ಕೇಳುವುದು ಸರಿಯಲ್ಲ ಎಂದು ದೂರಿದರು. ಮಳೆಯಿಂದ ಕಳೆದ ವರ್ಷ ಹಾನಿಯಾಗಿರುವ ರೈತರ ಬೆಳೆಗಳಿಗೆ ಇನ್ನೂ ಸರಿಯಾದ ಪರಿಹಾರ ದೊರಕಿಲ್ಲ.

ಗ್ರಾಮಾಂತರ ಪ್ರದೇಶಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ತಾಲೂಕಿನ ಗಡಿ ಭಾಗದಲ್ಲಿ ಕಾಡು ಪ್ರಾಣಿಗಳ ಕಾಟ ಮಿತಿಮೀರಿದೆ. ತಾಲೂಕಿನಲ್ಲಿ 34 ಸಾವಿರ ಪೌತಿಖಾತೆಗಳು ಆಗಿಲ್ಲ. ತಾಲೂಕು ಕಚೇರಿಯಲ್ಲಿ ಬಡ ರೈತರಿಗೆ ಒಂದು, ಹಣ-ಪ್ರಭಾವ ಇದ್ದವರಿಗೆ ಮತ್ತೊಂದು ನ್ಯಾಯ ಎನ್ನುವಂತಾಗಿದೆ. ಹಣ ಕೊಟ್ಟವರಿಗೆ ಒಂದೇ ದಿನದಲ್ಲಿ ಯಾವುದೇ ದಾಖಲಾತಿಗಳು ಸಿಗುತ್ತವೆ. ಸಾಮಾನ್ಯ ಜನರಿಗೆ ವರ್ಷಗಟ್ಟಲೆ ಅಲೆಸುತ್ತಾರೆ ಎಂದು ಕೃಷಿಕರು ದೂರಿದರು. ತಾಲೂಕಿನ ಬಹುತೇಕ ನಾಡಕಚೇರಿಗಳಲ್ಲಿ ಅಧಿಕಾರಿಗಳು ಇರುವುದೇ ಇಲ್ಲ. ಅವರು ಪಟ್ಟಣದಲ್ಲೇ ಇರುತ್ತಾರೆ. ಜನನ, ಮರಣ ಪ್ರಮಾಣ ಪತ್ರ ಪಡೆಯಲು ಸರ್ಕಾರಿ ಸಿಬ್ಬಂದಿ ಲಂಚ ಕೇಳುತ್ತಾರೆ. ಒತ್ತಾಯ ಮಾಡಿ ಬಿಲ್ ಕೇಳಿದರೆ ರೈತರ ಮೇಲೆ ದೌರ್ಜನ್ಯ ಮಾಡುತ್ತಾರೆ. ತಾಲೂಕಿನ ಹಲವು ನಾಡಕಚೇರಿ ವ್ಯಾಪ್ತಿಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ . ಕೆರೆಗಳಲ್ಲಿ ತುಂಬಿರುವ ಹೂಳು ತೆಗೆಸಲು ಯಾರೂ ಗಮನ ಹರಿಸುತ್ತಿಲ್ಲ. ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲೂ ವ್ಯಾಪಕ ಅಕ್ರಮ ನಡೆಯುತ್ತಿದೆ ಎಂದು ದೂರಿದರು.

ತಗಡೂರು ಗ್ರಾಮ ಪಂಚಾಯಿತಿಯಿಂದ ನಡೆದ ವಿವಿಧ ಕಾಮಗಾರಿಯಲ್ಲಿ 10 ಲಕ್ಷ ರೂ. ಗಳ ಅಕ್ರಮ, ಅವ್ಯವಹಾರ ನಡೆಸಿರುವ ದೂರುಗಳಿವೆ. ಇಂದಿನ ಸಭೆಗೆ ಹಲವು ಇಲಾಖೆ ಅಧಿಕಾರಿಗಳು ಬಾರದೆ ಇರುವ ಕಾರಣ ಸಭೆ ಅಪೂರ್ಣವಾಗಿದೆ ಎಂದು ರೈತ ಮುಖಂಡರು ಆರೋಪಿಸಿದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ತಾಲೂಕು ದಂಡಾಧಿಕಾರಿಗಳು ನೋಟಿಸ್ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡರಾದ ಇಮ್ಮಾವು ರಘು, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಹಾಡ್ಯ ರವಿ, ಕಣೆನೂರು ಜಗದೀಶ, ಸತೀಶ ರಾವ್, ಮಂಜೇಶ ಕುಮಾರ್, ಮಹದೇವಸ್ವಾಮಿ ಸೇರಿದಂತೆ ಹಲವು ರೈತ ಸಂಘಟನೆಗಳ ಮುಖಂಡರು ಹಾಜರಿದ್ದರು.

ಸಭೆಯಲ್ಲಿ ಪ್ರತಿಧ್ವನಿಸಿದ ‘ವಿಜಯವಾಣಿ’ ವರದಿಗಳು

ಹಳ್ಳ ಹಿಡಿದ ಜಲ ಜೀವನ್ ಮಿಷನ್’ ( ವಿಜಯವಾಣಿ, ಮೇ 6) ಪ್ರಕಟವಾದ ವರದಿ ಬಗ್ಗೆ ಸಭೆಯಲ್ಲಿ ವ್ಯಾಪಕವಾದ ಚರ್ಚೆ ನಡೆಯಿತು. ಪತ್ರಿಕೆಯಲ್ಲಿ ಪ್ರಕಟವಾಗಿರುವಂತೆ ತಾಲೂಕಿನ ಎಲ್ಲ ಗ್ರಾಮದಲ್ಲೂ ‘ ಮನೆ ಮನೆಗೆ ಗಂಗೆ’ ಯೋಜನೆ ಉದ್ದೇಶ ಈಡೇರಿಲ್ಲ. ಕೋಟ್ಯಂತರ ರೂ. ಹಣ ಪೋಲಾಗಿದೆ. ಅಧಿಕಾರಿಗಳು ನಮ್ಮ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಾಗದ ಕಾರಣ ಸಭೆಗೆ ಚಕ್ಕರ್ ಹೊಡೆದಿದ್ದಾರೆ ಎಂದು ರೈತ ಮುಖಂಡರು ದೂರಿದರು.

ಸೋರುತ್ತಿದೆ ನಾಡ ಕಚೇರಿ ಕಟ್ಟಡ ( ವಿಜಯವಾಣಿ- ಏ. 28) ವರದಿ ಬಗ್ಗೆ ತೀವ್ರ ಚರ್ಚೆ ನಡೆಯಿತು. ದೊಡ್ಡ ಕವಲಂದೆಗೆ ನಾಡಕಚೇರಿ ಸ್ವಂತ ಕಟ್ಟಡ ನಿರ್ಮಿಸಲು ಶೀಘ್ರ ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ತೋಟಗಾರಿಕೆ ಇಲಾಖೆ ಚಂದ್ರು, ವಿವಿಧ ಇಲಾಖೆ ಅಧಿಕಾರಿಗಳಾದ ಭವ್ಯಶ್ರೀ ಮಂಜುಳಾ, ರವಿ, ರಾಜೇಶ , ನಾಗರಾಜ್, ನಿತಿನ್, ಕುಮಾರ್, ದೀಪಕ್ ಇತರರು ಇದ್ದರು.