ಜಿಲ್ಲೆ

ಎನ್‌ಐಟಿಕೆಯಲ್ಲಿ ತುರ್ತು ಸಹಾಯ ಕೇಂದ್ರ ಸರ್ಚ್ ಅನಾವರಣ



ಮಂಗಳೂರು : ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ)ದಲ್ಲಿ ಆವರಣದಲ್ಲಿ
ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ತುರ್ತು ಸಹಾಯ, ಪ್ರತಿಕ್ರಿಯೆ ಮತ್ತು ಸಂವಹನ ಕೇಂದ್ರ (ಸರ್ಚ್) ಆರಂಭಗೊಂಡಿದೆ.
ಕರಾವಳಿ ಪ್ರದೇಶಗಳಿಗೆ ಅನುಗುಣವಾಗಿ ತುರ್ತು ಪರಿಸ್ಥಿತಿ ಸಂದರ್ಭ ಈ ಕೇಂದ್ರ ಮಾಹಿತಿ ನೀಡಲಿದೆ. ಚರ ಕಂಟೇನರ್ ಕ್ಯಾಬಿನ್‌ಗಳ ಮೂಲಕ ಅತ್ಯಾಧುನಿಕ ಯುಎಚ್‌ಎಫ್/ವಿಎಚ್‌ಎಫ್/ಎಚ್‌ಎಫ್ ಕೇಂದ್ರಗಳೊಂದಿಗೆ ಸ್ವಾಯತ್ತ ವೈಮಾನಿಕ/ಸಾಗರ ವಾಹನಗಳನ್ನು ಸಂಯೋಜಿಸುವ ತಂತ್ರಜ್ಞಾನವನ್ನು ಈ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಎನ್‌ಐಟಿಕೆ ಸುರತ್ಕಲ್‌ನಲ್ಲಿರುವ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್ ನೇತೃತ್ವದಲ್ಲಿ ರೂಪುಗೊಂಡ ಈ ಕೇಂದ್ರವು ಜಾಗತಿಕವಾಗಿ ಗಮನ ಸೆಳೆದಿದೆ. ಇದು ಸ್ವಾಯತ್ತ ಸಾಗರ ನೌಕೆಗಳು, ವೈಮಾನಿಕ ವಾಹನಗಳು ಮತ್ತು ಹವ್ಯಾಸಿ ರೇಡಿಯೊ ಕೇಂದ್ರಗಳನ್ನು ಏಕಕಾಲದಲ್ಲಿ ಸಂಯೋಜಿಸುವ ಮೂಲಕ ವಿಪತ್ತು ನಿರ್ವಹಣೆ, ತುರ್ತು ಪ್ರತಿಕ್ರಿಯೆ ಮತ್ತು ಸಂವಹನ ವ್ಯವಸ್ಥೆಗಳಿಗೆ ಕ್ರಾಂತಿಕಾರಿ ವಿಧಾನವಾಗಿ ಪರಿಣಮಿಸಿದೆ. ಹವ್ಯಾಸಿ ರೇಡಿಯೋ ಕಾರ್ಯಾಚರಣೆಗಳನ್ನು ಮಂಗಳೂರು ಹವ್ಯಾಸೀ ರೇಡಿಯೋ ಕ್ಲಬ್ ಸಹಕಾರದೊಂದಿಗೆ, ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿ ಸಂವಹನವನ್ನು ಸಾಧಿಸುವ ಮಾಧ್ಯಮವನ್ನು ಕಲ್ಪಿಸಲಾಗಿದೆ.
ಸರ್ಚ್‌ನ ಮುಖ್ಯಸ್ಥ ಡಾ. ಪ್ರಥ್ವಿರಾಜ್ ಯು. ಇದರ ಪರಿಕಲ್ಪನೆ ಮತ್ತು ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರೊ.ಕೆ. ವಿ. ಗಂಗಾಧರನ್, ಡಾ. ಮೋಹಿತ್ ಪಿ. ತಾಹಿಲಿಯಾನಿ, ಡಾ. ಶ್ರೀವಲ್ಸಾ ಕೊಲತಾಯರ್ ಮುಂತಾದವರು ಸರ್ಚ್ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಎನ್‌ಐಟಿಕೆ ಸುರತ್ಕಲ್ ನಿರ್ದೇಶಕ ಬಿ. ರವಿ ಅವರ ಉಪಸ್ಥಿತಿಯಲ್ಲಿ ಸರ್ಚ್ ಉದ್ಘಾಟನಾ ಸಮಾರಂಭ ನಡೆಯಿತು. ಸಂಸ್ಥೆಯ ಹಳೇ ವಿದ್ಯಾರ್ಥಿ ರಂಗನ್ ರಾಮಸಾಮಿ , ಉದ್ಯಮಿ ಯಜ್ಞ ನಾರಾಯಣ ಕಮ್ಮಾಜೆ, ಎನ್‌ಸಿಸಿ ಕಚೇರಿಯ ಅಧಿಕಾರಿ ಕರ್ನಲ್ ಅನಿಲೇಶ್ ಕೌಶಿಕ್ , ಹಳೇ ವಿದ್ಯಾರ್ಥಿಗಳಾದ ರಾಮ್ ಭಂಡಾರೆ, ಎ. ಎಸ್. ಕಾರಂತ್ ಉಪಸ್ಥಿತರಿದ್ದರು.