ಜಿಲ್ಲೆ

ಅಕ್ಕಿಆಲೂರ ನಾಲ್ಕರ ಕ್ರಾಸ್​ನಲ್ಲಿ ಬಸ್ ನಿಲ್ದಾಣ ನಿರ್ವಿುಸಿ

Haveri - Desk - Ganapati Bhat

ಅಕ್ಕಿಆಲೂರ: ಸಮೀಪದ ನಾಲ್ಕರ ಕ್ರಾಸ್ ಬಳಿ ಬಸ್​ಗಾಗಿ ಕಾಯುವ ಪ್ರಯಾಣಿಕರಿಗೆ ನಿಲ್ದಾಣದ ವ್ಯವಸ್ಥೆ ಇಲ್ಲದೆ ನಿತ್ಯ ಪರದಾಡುತ್ತಿದ್ದು, ಹೊಸ ನಿಲ್ದಾಣಕ್ಕೆ ಒತ್ತಾಯ ಹೇಳಿ ಬರುತ್ತಿದೆ.

ಶಿವಮೊಗ್ಗದಿಂದ ಉತ್ತರ ಕನ್ನಡ, ಹಾವೇರಿಯಿಂದ ಧಾರವಾಡ ಹಾಗೂ ಉತ್ತರ ಕನ್ನಡದಿಂದ ಉತ್ತರ ಕರ್ನಾಟಕ ಭಾಗಕ್ಕೆ ತೆರಳಲು ಪ್ರಮುಖ ಕ್ರಾಸ್ ಆಗಿರುವ ನಾಲ್ಕರ ಕ್ರಾಸ್​ನಲ್ಲಿ ದಿನ ಬೆಳಗಾದರೆ ನೂರಾರು ಪ್ರಯಾಣಿಕರು ಆಗಮಿಸುತ್ತಾರೆ. ನೇರ ಬಸ್ ವ್ಯವಸ್ಥೆ ಇಲ್ಲದೆ ಇರುವಾಗ ನಾಲ್ಕರ ಕ್ರಾಸ್​ಗೆ ಆಗಮಿಸಿ ಇಲ್ಲಿಂದ ಬಸ್ ಬರುವವರೆಗೂ ಕಾಯ್ದು ತೆರಳುವವರ ಸಂಖ್ಯೆಯೆ ಹೆಚ್ಚು. ಅಂತರ ಜಿಲ್ಲಾ ಸಾರಿಗೆ ಸೌಲಭ್ಯ ಹೊಂದಲು ಮುಖ್ಯ ಕೇಂದ್ರವಾಗಿರುವ ನಾಲ್ಕರ ಕ್ರಾಸ್​ನಲ್ಲಿ ಇದುವರೆಗೂ ಬಸ್ ನಿಲ್ದಾಣದ ವ್ಯವಸ್ಥೆಯೇ ಇಲ್ಲದಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ನಾಲ್ಕು ಕಡೆಗಳಿಂದ ಬರುವ ಬಸ್​ನಿಂದ ಇಳಿಯುವವರು, ಹತ್ತುವವರು ಮತ್ತೆ ಮಾರ್ಗ ಬದಲಾವಣೆ ಮಾಡಿ, ಬೇರೆ ಬಸ್ ಹತ್ತುವ ಪ್ರಯಾಣಿಕರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ನಾಲ್ಕು ಕಡೆಗಳಲ್ಲಿ ಬಸ್​ಗಾಗಿ ಕಾಯುವ ಪ್ರಯಾಣಿಕರಿಗೆ ಅಕ್ಕಪಕ್ಕದ ಟೀ ಮತ್ತು ಪಾನ್ ಶಾಪ್​ಗಳೇ ಆಶ್ರಯ ನೀಡುತ್ತಿವೆ. ಮಲೆನಾಡ ಭಾಗಕ್ಕೆ ತಾಗಿಕೊಂಡಿರುವ ಈ ಪ್ರದೇಶದಲ್ಲಿ ಬಿಟ್ಟುಬಿಡದೆ ಸುರಿಯುವ ಮಳೆಯ ಮಧ್ಯೆಯೂ ಜನ ಛತ್ರಿ ಹಿಡಿದುಕೊಂಡೆ ಬಸ್​ಗಾಗಿ ಕಾಯುವ ದೃಶ್ಯ ಸಾಮಾನ್ಯವಾಗಿರುತ್ತದೆ.

ಎಚ್ಚರಿಕೆ ತಪ್ಪಿದರೆ ಅಪಾಯ: ಒಂದು ಕಡೆಯಿಂದ ಬಸ್ ಇಳಿದು ರಸ್ತೆ ದಾಟಿ, ಮತ್ತೊಂಡು ಕಡೆ ಓಡಿ ಹೋಗಿ ಬಸ್ ಹತ್ತುವ ಪ್ರಯಾಣಿಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಸಂಭವಿಸುತ್ತದೆ.

ನಾಲ್ಕರ ಕ್ರಾಸ್​ಗೆ ಇಳಿದು ಅಕ್ಕಿಆಲೂರಿಗೆ ಬರುವ ಹಾಗೂ ಬೇರೆ ಬಸ್ ಹತ್ತುವ ಪ್ರಯಾಣಿಕರಿಗೆ ನಿಲ್ಲಲು ಬಸ್ ನಿಲ್ದಾಣ ಇಲ್ಲದಿರುವುದರಿಂದ ಸಾಕಷ್ಟು ತೊಂದರೆಯಾಗಿದೆ. ವಿದ್ಯಾರ್ಥಿಗಳು ಮಳೆಯಲ್ಲಿ ತೊಯ್ಯಿಸಿಕೊಂಡು ಶಾಲೆ-ಕಾಲೇಜಿಗೆ ಬರುತ್ತಿದ್ದಾರೆ. ನಾಲ್ಕು ಜಿಲ್ಲೆಗಳನ್ನು ಸಂರ್ಪಸುವ ನಾಲ್ಕರ ಕ್ರಾಸ್​ಗೆ ನಾಲ್ಕು ಬಸ್ ನಿಲ್ದಾಣ, ಸಾರ್ವಜನಿಕ ಶೌಚಗೃಹದ ಅಗತ್ಯವಿದೆ. ಅಧಿಕಾರಿಗಳು ಇತ್ತ ಗಮನ ಹರಿಸಿ ವ್ಯವಸ್ಥೆ ಕಲ್ಪಿಸಬೇಕು. | ಸಿದ್ದಲಿಂಗೇಶ ತುಪ್ಪದ ಬಿಜೆಪಿ ಮುಖಂಡ ಅಕ್ಕಿಆಲೂರ