ದೇವನಹಳ್ಳಿ: ಬಡತನಕ್ಕೆ ಮೂಲ ಕಾರಣ ಅನಕ್ಷರತೆ, ನಿರುದ್ಯೋಗ. ಆದರೆ ಇತ್ತೀಚೆಗೆ ಅಕ್ಷರಸ್ತರಿಗೂ ಸೂಕ್ತ ಉದ್ಯೋಗ ದೊರೆಯದಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣಪ್ಪ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಎನ್‌ಎಬಿಎಚ್ ಮಾನ್ಯತೆ ಪಡೆದ (ರಾಷ್ಟ್ರೀಯ ಮಾನ್ಯತೆ ಪಡೆದ ಆಸ್ಪತ್ರೆಗಳ ಮಂಡಳಿ) ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ವಿವಿಧ ತಾಂತ್ರಿಕ ಹುದ್ದೆಗಳಿಗೆ ಉದ್ಯೋಗ ಭರವಸೆ ಮೇರೆಗೆ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ವೃತ್ತಿ ಕೌಶಲ ಅಭಿವೃದ್ಧಿ ತರಬೇತಿ ನೀಡಲು ಶನಿವಾರ ಏರ್ಪಡಿಸಿದ್ದ ಉದ್ಯೋಗಮೇಳದಲ್ಲಿ ಮಾತನಾಡಿದರು.
ಇಲ್ಲಿ ಪ್ರಮುಖವಾಗಿ ಆಶಾಕಾರ್ಯಕರ್ತೆಯರೇ ಹೆಚ್ಚಾಗಿದ್ದು, ಆಶಾಕಾರ್ಯಕರ್ತೆಯರು ಪ್ರತಿ ಹಳ್ಳಿಗಳಲ್ಲೂ ವೈದ್ಯಕೀಯ ಸೇವೆ ನೀಡಲು ಸಾಕಷ್ಟು ಶ್ರಮಿಸುತ್ತಿದ್ದು, ಅವರನ್ನು ಕಾಯಂಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ರಾಜ್ಯ ಸರ್ಕಾರದ ಕೌಶಲಾಭಿವೃದ್ದಿ ಇಲಾಖೆಯಿಂದ ಉದ್ಯೋಗಮೇಳ ಆಯೋಜಿಸಲಾಗಿದೆ. 1:3 ಅನುಪಾತದಲ್ಲಿ ಆಯ್ಕೆ ಮಾಡಿಕೊಂಡು ಕೌಶಲ ತರಬೇತಿ ನೀಡಿ ಉದ್ಯೋಗ ಕಲ್ಪಿಸಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುಳಾದೇವಿ ಮಾತನಾಡಿ, ಸ್ಥಳೀಯರಿಗೆ ಅದರಲ್ಲೂ ಕನ್ನಡಿಗರಿಗೆ ಹೆಚ್ಚು ಉದ್ಯೋಗ ದೊರಕಲಿ ಎಂಬ ಆಶಯದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.
ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಧರ್ಮೇಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ.ಪಿ.ಕೆ.ಸಂಜಯ್, ಡಾ.ಶ್ರೀನಿವಾಸ, ಡಾ.ರಮೇಶ್ ಮತ್ತಿತರರಿದ್ದರು.
230 ಮಂದಿಗೆ ತರಬೇತಿ, ಉದ್ಯೋಗ: ಉದ್ಯೋಗಮೇಳದಲ್ಲಿ 325 ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಅಪಲೋ ಆಸ್ಪತ್ರೆಗೆ 127, ನಾರಾಯಣ ಹೃದಯಾಲಯಕ್ಕೆ 7 ಹಾಗೂ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ 96 ಮಂದಿಯನ್ನು ಸೇರಿ ಒಟ್ಟು 230 ಮಂದಿಗೆ ತರಬೇತಿ ನೀಡಿ ಉದ್ಯೊಗ ಕಲ್ಪಿಸಲು ಆಯ್ಕೆ ಮಾಡಿಕೊಳ್ಳಲಾಯಿತು.