ಮಂಡ್ಯ: ರಾಷ್ಟಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳ ಪಟ್ಟಿಯಲ್ಲಿ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿಗೆ 2023ನೇ ಸಾಲಿನಲ್ಲಿ 151-200 ಬ್ಯಾಂಡ್‌ನಲ್ಲಿ ಎನ್‌ಐಆರ್‌ಎಫ್ ರ‌್ಯಾಂಕ್ ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಎಂ.ಮಹಾಲಿಂಗೇಗೌಡ ತಿಳಿಸಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರ‌್ಯಾಂಕ್ ಪಡೆದಿರುವ ತಾಂತ್ರಿಕ ವಿದ್ಯಾಸಂಸ್ಥೆಗಳ ಪಟ್ಟಿಯನ್ನು ಜೂ.5ರಂದು ಬಿಡುಗಡೆ ಮಾಡಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನಮ್ಮ ಕಾಲೇಜು ಎನ್‌ಐಆರ್‌ಎಫ್ ರ‌್ಯಾಂಕ್‌ನಲ್ಲಿ ಸ್ಥಿರತೆ ಕಾಪಾಡಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
2019ರಲ್ಲಿ 161ನೇ ರ‌್ಯಾಂಕ್, 2020ರಲ್ಲಿ 147ನೇ ರ‌್ಯಾಂಕ್, 2021ರಲ್ಲಿ 139ನೇ ರ‌್ಯಾಂಕ್, 2022ರಲ್ಲಿ 137ನೇ ರ‌್ಯಾಂಕ್ ಪಡೆದಿತ್ತು. ಆದರೆ, 2023ರಲ್ಲಿ ರ‌್ಯಾಂಕ್ ಬದಲಿಗೆ ಬ್ಯಾಂಡ್ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ 151ರಿಂದ 200ನೇ ಬ್ಯಾಂಡ್‌ನಲ್ಲಿ ನಮ್ಮ ಕಾಲೇಜು ಸ್ಥಾನ ಪಡೆದಿದೆ. ಇದು ಹೆಮ್ಮೆಯ ಸಂಗತಿ. ಎಆರ್11ಎ ಆವೃತ್ತಿಯನ್ನು ಎನ್‌ಐಆರ್‌ಎಫ್ ಇನ್ನೋವೇಷನ್ ಶ್ರೇಯಾಂಕ ಎಂದು ಮರು ನಾಮಕರಣ ಮಾಡಲಾಗಿದೆ. ಇದು ಎಆರ್11ಎ ಚೌಕಟ್ಟು ನಿಯತಾಂಕ ಮತ್ತು ಪ್ರಮುಖ ಕಾರ್ಯಕ್ಷಮತೆ ಸೂಚನೆಗಳನ್ನು ಒಳಗೊಂಡಿದೆ. ಈ 4ನೇ ಆವೃತ್ತಿಯಲ್ಲಿ ನಮ್ಮ ಕಾಲೇಜು ರಾಷ್ಟ ಮಟ್ಟದಲ್ಲಿ 11ರಿಂದ 50 ಬ್ಯಾಂಡ್ ರ‌್ಯಾಂಕ್ ಗಳಿಸಿದೆ. ಈ ಪಟ್ಟಿಯಲ್ಲಿ ರಾಷ್ಟದ ಟಾಪ್ 50 ಕಾಲೇಜು/ವಿಶ್ವವಿದ್ಯಾಲಯಗಳು ಸೇರಿದ್ದು, ಕರ್ನಾಟಕದ 4 ಕಾಲೇಜುಗಳಿವೆ. ಆ ಪೈಕಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿಗೆ 3ನೇ ಸ್ಥಾನ ಪಡೆದಿದೆ. ಅದರಲ್ಲೂ ಸರ್ಕಾರಿ, ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ವಿವರಿಸಿದರು.
ಎನ್‌ಎಆರ್‌ಎಫ್ ನೀಡುವ ಪ್ರಕ್ರಿಯೆಯಲ್ಲಿ ಆಯಾ ಕಾಲೇಜಿನಲ್ಲಿರುವ ಸೌಲಭ್ಯಗಳಾದ ಬೋಧನೆ, ಕಲಿಕೆ ಮತ್ತು ಸಂಪನ್ಮೂಲಗಳು, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸಗಳು, ಪದವಿ ಫಲಿತಾಂಶಗಳು, ಔಟ್‌ರೀಚ್‌ನ್ನು ಒಳಗೊಂಡಿದೆ. ದೇಶದ 4500 ಇಂಜಿನಿಯರಿಂಗ್ ಕಾಲೇಜುಗಳ ಪೈಕಿ 2600 ಕಾಲೇಜುಗಳು ಈ ಪದವಿಗಾಗಿ ಅರ್ಜಿ ಸಲ್ಲಿಸಿದ್ದವು. ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಮಾತ್ರವಲ್ಲದೆ ದೇಶದ ಇತರ 17 ರಾಜ್ಯಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 200 ಸಿಬ್ಬಂದಿಯಲ್ಲಿ 70 ಜನ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಶೇ.80ರಷ್ಟು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಪ್ಲೇಸ್‌ಮೆಂಟ್ ಆಗುತ್ತಿದ್ದು, ಅವರಿಗೆ ಒಳ್ಳೆಯ ಪ್ಯಾಕೇಜ್ ಸಹ ಸಿಗುತ್ತಿದೆ. ಇವೆಲ್ಲ ಅಂಶಗಳು ಎನ್‌ಐಆರ್‌ಎಫ್ ರ‌್ಯಾಂಕ್ ಮಾನದಂಡವಾಗಿವೆ ಎಂದು ಹೇಳಿದರು.
ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಅಧಿಕಾರಿ ಡಾ.ಎಸ್.ವಿನಯ್, ವಿವಿಧ ವಿಭಾಗದ ಡಾ.ಗಿರೀಶ್‌ಬಾಬು, ಡಾ.ಡಿ.ಆರ್.ಉಮೇಶ್, ಡಾ.ಆರ್.ಗಿರೀಶ್, ಡಾ.ಮಹೇಂದ್ರಬಾಬು, ಡಾ.ಸಿದ್ದೇಶ ಇದ್ದರು.