ಜಿಲ್ಲೆ

ಮೈಸೂರಿನಲ್ಲಿ ಡಿ.25 ರಿಂದ ‘ನಿರಂತರ ರಂಗ ಉತ್ಸವ’

ಮೈಸೂರು: ನಿರಂತರ ಫೌಂಡೇಷನ್ ವತಿಯಿಂದ ಡಿ.25 ರಿಂದ 30ರವರೆಗೆ ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ‘ನಿರಂತರ ರಂಗ ಉತ್ಸವ’ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಎಂ.ಎ. ಸುಗುಣ ತಿಳಿಸಿದರು.

ಡಿ.25 ರಂದು ಸಂಜೆ 7ಕ್ಕೆ ಸಮತೆಂತೋ ತಂಡದಿಂದ ‘ನೀರ್ಮಾದಳ ಹೂವಿನೊಂದಿಗೆ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಉದ್ಘಾಟನಾ ಸಮಾರಂಭವನ್ನು ಡಿ.26 ರಂದು ಸಂಜೆ 6ಕ್ಕೆ ಹಮ್ಮಿಕೊಳ್ಳಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ರಂಗಕರ್ಮಿ ಪ್ರಸಾದ್ ಕುಂದೂರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಸಂಜೆ 5.30ಕ್ಕೆ ಅಭಿನವ ವೀರಭದ್ರೇಶ್ವರ ತಂಡದಿಂದ ವೀರಗಾಸೆ ಏರ್ಪಡಿಸಲಾಗಿದೆ. ಸಂಜೆ 7ಕ್ಕೆ ನಿರ್ದಿಗಂತ ತಂಡದಿಂದ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿ.27 ರಂದು ಸಂಜೆ 7ಕ್ಕೆ ಮೂಡಬಿದಿರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರಿಂದ ‘ಚಾರುವಸಂತ’ ನಾಟಕ, 28 ರಂದು ಸಂಜೆ 7ಕ್ಕೆ ಏಳಕ್ಕೆ ಉಸ್ತಾದ್ ಫಯಾಜ್ ಖಾನ್‌ರಿಂದ ಸಂಗೀತ ಸಂಜೆ, 29 ರಂದು ಸಂಜೆ 7ಕ್ಕೆ ಸಮುದಾಯ ರಾಯಚೂರು ತಂಡದಿಂದ ‘ರಕ್ತ ವಿಲಾಪ’ ನಾಟಕ ಪ್ರದರ್ಶನ, ಡಿ.30 ರಂದು ಸಂಜೆ 5.30ಕ್ಕೆ ನಗಾರಿ ಮಂಜು ಮೈಸೂರು ತಂಡದಿಂದ ನಗಾರಿ ಮತ್ತು ತಮಟೆ ವಾದ್ಯ, ಸಂಜೆ 6.15ಕ್ಕೆ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ನಟ ಪ್ರಕಾಶ್‌ರಾಜ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ. ನಂತರ ಸಂಜೆ 7ಕ್ಕೆ ಭಳೆರೇ ವಿಚಿತ್ರಮ್ ತಂಡದಿಂದ ‘ದಶಾನನ ಸ್ವಪ್ನಸಿದ್ಧಿ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಮುಖರಾದ ನಾ. ದಿವಾಕರ್, ಶ್ರೀನಿವಾಸ್, ಕೆಂಪರಾಜು, ಯಶಸ್ವಿನಿ ಹಾಗೂ ಇತರರು ಇದ್ದರು.