ಹಿರಿಯರಾದರೂ ಸಕ್ರಿಯರಾಗಿರುವ ಅನೇಕರ ಉತ್ಸಾಹ ನಮಗೆ ಪ್ರೇರಣೆ. ಸಾಹಿತ್ಯ ರಚನೆ ಮಾಡುವ ಸಾಧಕರ ಸಂಪರ್ಕಕ್ಕೆ ಬಂದವರು ಒಳ್ಳೆಯ ಭಾಷಾ ಜ್ಞಾನ ಹೊಂದಬಹುದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರ, ಡಾ.ಕೆ.ಶಿವರಾಮ ಕಾರಂತ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಹಾಗೂ ಐಕ್ಯುಎಸಿ ಸಹಯೋಗದಲ್ಲಿ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.
ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ ಅವರಿಗೆ ನಿರಂಜನ ಪ್ರಶಸ್ತಿ, ಬಹುಭಾಷಾ ವಿದ್ವಾಂಸ ಡಾ.ಡಿ.ಸದಾಶಿವ ಭಟ್ ಪಳ್ಳು ಅವರಿಗೆ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅಭಿನಂದನಾ ನುಡಿಗಳನ್ನಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್, ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ, ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಉಪಸ್ಥಿತರಿದ್ದರು.
ಶಿವರಾಮ ಕಾರಂತ ಅಧ್ಯಯನ ಕೇಂದ್ರ ಸಂಯೋಜಕ ಡಾ.ಪ್ರಮೋದ್ ಎಂ.ಜಿ ಸ್ವಾಗತಿಸಿದರು. ಉಪಪ್ರಾಂಶುಪಾಲ ಪ್ರೊ.ಶಿವಪ್ರಸಾದ್ ಕೆ.ಎಸ್. ವಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಮನಮೋಹನ ಎಂ. ಕಾರ್ಯಕ್ರಮ ನಿರೂಪಿಸಿದರು.