ಗುಂಡ್ಲುಪೇಟೆ: ತಾಲೂಕಿನ ಕೆಲಸೂರು ಮತ್ತು ಮಲ್ಲಮ್ಮನ ಹುಂಡಿ ಗ್ರಾಮಗಳ ನಡುವೆ ನೀರಹಳ್ಳಕ್ಕೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಕಳಪೆಯಾಗಿದ್ದು, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಬಿರುಕು ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದಿನಿಂದಲೂ ಮಳೆಗಾಲದಲ್ಲಿ ಭಾರಿ ನೀರು ಹರಿದುಹೋಗುತ್ತಿದ್ದ ಹಳ್ಳಕ್ಕೆ ಇತ್ತೀಚೆಗೆ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಗುತ್ತಿಗೆದಾರನು ಕಾಮಗಾರಿಯನ್ನು ಪೂರ್ಣಗೊಳಿಸದೆ ಸ್ಥಗಿತಗೊಳಿಸಿದ್ದಾರೆ. ಮಳೆನೀರು ಜೋರಾಗಿ ಹರಿದು ಬರುವ ಹಳ್ಳಕ್ಕೆ ಕಟ್ಟಿರುವ ಸೇತುವೆಯ ಬದಿಗಳಲ್ಲಿ ಕಲ್ಲಿನ ಗೋಡೆಗಳನ್ನು ನಿರ್ಮಿಸದಿರುವುದರಿಂದ ನಿರ್ಮಾಣ ಹಂತದಲ್ಲಿಯೇ ಸೇತುವೆ ಬಿರುಕು ಬಿಡುತ್ತಿದೆ. ಅಲ್ಲದೆ ಕಲ್ಲಿನ ತಡೆಗೋಡೆಗಳನ್ನು ಅಳವಡಿಸದ ಪರಿಣಾಮ ಮಳೆನೀರು ರೈತರ ಜಮೀನುಗಳಿಗೆ ನುಗ್ಗಿ ಬೆಳೆನಾಶಪಡಿಸುವ ಆತಂಕ ಎದುರಾಗಿದೆ.
ಗುತ್ತಿಗೆದಾರರು ಸೇತುವೆ ಕಾಮಗಾರಿಗೆ ಸಂಬಂಧಪಟ್ಟ ಮಾಹಿತಿಯ ಫಲಕವನ್ನು ಅಳವಡಿಸಿಲ್ಲ. ಇದರಿಂದ ಕಾಮಗಾರಿಯ ವಿವರಗಳೂ ತಿಳಿಯದಂತಾಗಿದ್ದು ಇದರ ಬಗ್ಗೆ ಯಾರನ್ನು ಸಂಪರ್ಕಿಸಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಆದ್ದರಿಂದ ಇನ್ನಾದರೂ ಸಂಬಂಧಿಸಿದವರು ಕಾಮಗಾರಿಯ ಗುಣಮಟ್ಟ ನಿರ್ವಹಣೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಬಸವ ನಾಯಕ, ಸಿದ್ದರಾಜು, ಗುರು ಸಿದ್ದಪ್ಪ, ಜವರನಾಯ್ಕ ಒತ್ತಾಯಿಸಿದ್ದಾರೆ.