ಜಿಲ್ಲೆ

ನೇತ್ರಗಳಿಗೆ 'ಆಶಾಕಿರಣ'ದ ದೃಷ್ಟಿ...

ಉಡುಪಿ ಜಿಲ್ಲೆಯಲ್ಲಿ 9 ಉಚಿತ ಕೇಂದ್ರಗಳ ಕಾರ್ಯಾಚರಣೆ

2,197 ಮಕ್ಕಳು, 6,299 ಜನರಿಗೆ ಕನ್ನಡಕ ಪೂರೈಕೆ

ಪ್ರಶಾಂತ ಭಾಗ್ವತ ಉಡುಪಿ

ದೇಹದ ಅಂಗಗಳಲ್ಲಿ ಕಣ್ಣುಗಳು ಹೆಚ್ಚಿನ ಮಹತ್ವ ಪಡೆದಿದೆ. ಅವುಗಳನ್ನು ಸರಿಯಾಗಿ ಆರೈಕೆ ಮಾಡದಿದ್ದಲ್ಲಿ ಜೀವನವೇ ಕತ್ತಲಲ್ಲಿ ಮುಳುಗಬಹುದು. ಹೀಗಾಗಿ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣಾ ಕಾರ್ಯಕ್ರಮದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯವ್ಯಾಪಿ ಆಶಾಕಿರಣ ದೃಷ್ಟಿ ಕೇಂದ್ರ ತೆರೆದಿದೆ.

ಉಡುಪಿ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಮೂರನೇ ಹಂತದ ಆಶಾ ಕಿರಣ ಯೋಜನೆ ಅನುಷ್ಠಾನಗೊಂಡಿದ್ದು ಒಟ್ಟು 9 ಕಡೆಗಳಲ್ಲಿ ದೃಷ್ಟಿ ಕೇಂದ್ರ ಕಾರ್ಯಾಚರಿಸುತ್ತಿವೆ. ವಾರ್ಷಿಕ ಗುರಿಯನ್ನೂ ಮೀರಿ ಜನರಿಗೆ ಉಚಿತವಾಗಿ ಸೌಲಭ್ಯ ನೀಡಲಾಗುತ್ತಿದೆ.

2,197 ಮಕ್ಕಳಿಗೆ ಕನ್ನಡಕ

ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಬಾಲ ಕಿಶೋರ ಸ್ವಾಸ್ಥ್ಯ (ಆರ್​ಬಿಎಸ್​ಕೆ) ಯೋಜನೆಯಡಿ ಅಂಗನವಾಡಿ ಹಾಗೂ ಸರ್ಕಾರಿ, ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ 74,738 ಮಕ್ಕಳ ಕಣ್ಣುಗಳನ್ನು ಆಯಾ ಶಾಲೆಗಳಲ್ಲಿಯೇ ತಪಾಸಣೆ ಮಾಡಲಾಗಿದೆ. ದೃಷ್ಟಿದೋಷ ಕಂಡುಬಂದ 2,197 ಮಕ್ಕಳಿಗೆ ಯೋಜನೆಯಡಿ ಉಚಿತವಾಗಿ ಕನ್ನಡಕ ನೀಡಲಾಗಿದೆ.

ಗುರಿ ಮೀರಿ ಸಾಧನೆ

ಯೋಜನೆಯಡಿ ಉಡುಪಿ ಜಿಲ್ಲೆಗೆ 2024-25ನೇ ಸಾಲಿಗೆ 9,466 ಕಣ್ಣಿನ ಶಸ್ತ್ರ ಚಿಕಿತ್ಸೆಯ ಗುರಿ ನೀಡಲಾಗಿತ್ತು. ಆದರೆ, 10,844 ಜನರಿಗೆ ಪೊರೆ ಸೇರಿದಂತೆ ಅಂಧತ್ವ ನಿವಾರಣೆಯ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಗುರಿಮೀರಿ ಸಾಧಿಸಲಾಗಿದೆ. ದೃಷ್ಟಿ ಕೇಂದ್ರಗಳಲ್ಲಿ ಸಾರ್ವಜನಿಕರ ನೇತ್ರ ತಪಾಸಣೆ ನಡೆಸಲಾಗುತ್ತಿದ್ದು ಈವರೆಗೆ 40 ವಯಸ್ಸಿಗಿಂತ ಕೆಳಗಿನ 2,947 ಹಾಗೂ 40 ವರ್ಷ ಮೇಲ್ಪಟ್ಟ 3,352 ಸೇರಿ ಒಟ್ಟು 6,299 ಮಂದಿಗೆ ಉಚಿತವಾಗಿ ಕನ್ನಡಕ ನೀಡಲಾಗಿದೆ.

ಜಿಲ್ಲೆಯಲ್ಲಿರುವ 9 ಕೇಂದ್ರಗಳು

ಜಿಲ್ಲೆಯ ಆರು ಸಮುದಾಯ ಆರೋಗ್ಯ ಕೇಂದ್ರಗಳಾದ ಬೈಂದೂರು, ಕೋಟ, ಬ್ರಹ್ಮಾವರ, ಶಿರ್ವ, ನಿಟ್ಟೆ, ಹೆಬ್ರಿ ಹಾಗೂ ಉಡುಪಿ ಜಿಲ್ಲಾಸ್ಪತ್ರೆ, ಕುಂದಾಪುರ ತಾಲೂಕು ಆಸ್ಪತ್ರೆ, ಕಾರ್ಕಳ ತಾಲೂಕು ಆಸ್ಪತ್ರೆ ಸೇರಿ ಒಟ್ಟು 9 ಘಟಕಗಳಿವೆ. ಸರ್ಕಾರಿ ತಜ್ಞ ವೈದ್ಯರೊಂದಿಗೆ ಉಡುಪಿ ಜಿಲ್ಲೆಯ 4 ಎನ್​ಜಿಒಗಳ ಸಹಭಾಗಿತ್ವದಲ್ಲಿ ಎಲ್ಲ ಕೇಂದ್ರಗಳನ್ನೂ ನಿರ್ವಹಿಸಲಾಗುತ್ತಿದೆ.

ರಾಜ್ಯದಲ್ಲಿದೆ ಯೋಜನೆಯ 393 ಘಟಕ

ಕರ್ನಾಟಕ ರಾಜ್ಯದಲ್ಲಿ ಅಂಧತ್ವ ಪ್ರಮಾಣ ದರ ತಗ್ಗಿಸುವ ಉದ್ದೇಶದಿಂದ 2022-23 ಹಾಗೂ 2023-24ರಲ್ಲಿ ತಲಾ ನಾಲ್ಕರಂತೆ ಎಂಟು ಜಿಲ್ಲೆಗಳಲ್ಲಿ ಆಶಾಕಿರಣ ದೃಷ್ಟಿ ಕೇಂದ್ರ ಜಾರಿಗೊಳಿಸಲಾಗಿತ್ತು.  2024-25ರಲ್ಲಿ ಮೂರನೇ ಹಂತದ ಯೋಜನೆ ಜಾರಿಗೆ ಗದಗ, ಕೊಡಗು, ರಾಮನಗರ, ಯಾದಗಿರಿ, ಉಡುಪಿ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿತ್ತು. ಬಳಿಕ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಯೋಜನೆ ವಿಸ್ತರಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳೂ ಸೇರಿ ಒಟ್ಟು 393 ದೃಷ್ಟಿ ಕೇಂದ್ರ ತೆರೆಯಲಾಗಿದೆ. 
ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ ಎಲ್ಲ ಸೌಲಭ್ಯವೂ ಉಚಿತ. ಎಪಿಎಲ್​, ಬಿಪಿಎಲ್​ ಮಾನದಂಡವೂ ಇಲ್ಲ. ಜಿಲ್ಲೆಯಲ್ಲಿ ನಾಲ್ಕು ನೇತ್ರ ತಜ್ಞರು, ನೇತ್ರ ಸಹಾಯಕರು ಸೇರಿ ಒಟ್ಟು 11 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೋಷ ಇರುವವರು ದೃಷ್ಟಿ ಕೇಂದ್ರದಲ್ಲಿ ಉಚಿತವಾಗಿ ಸಮಗ್ರ ತಪಾಸಣೆ, ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು. ಕನ್ನಡಕವನ್ನೂ ಪಡೆಯಬಹುದು. ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು. | ಡಾ. ಲತಾ ನಾಯಕ. ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ.