ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯ ಗಂಜಾಂನ ಶಕ್ತಿದೇವತೆ ಶ್ರೀನಿಮಿಷಾಂಬೆಯ ವಧರ್ಂತಿ ಮಹೋತ್ಸವ ಪ್ರಯುಕ್ತ ತಾಯಿಯ ಉತ್ಸವ ಮೂರ್ತಿ ವಿಶೇಷ ಉತ್ಸವ ನೆರವೇರಿತು. 
ಜಿಲ್ಲೆ

ನಿಮಿಷಾಂಬಾ ದೇವಿ ಮೂರ್ತಿ ಮೆರವಣಿಗೆ

ನಾಗೇಶ ಎಸ್

ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂನ ಶಕ್ತಿದೇವತೆ ಶ್ರೀ ನಿಮಿಷಾಂಬದೇವಿಯ ವರ್ಧಂತಿ ಮಹೋತ್ಸವ ಪ್ರಯುಕ್ತ ಗಂಜಾಂನಲ್ಲಿ ನಿಮಿಷಾಂಬೆ ತಾಯಿಯ ಉತ್ಸವ ಮೂರ್ತಿಯನ್ನು ವಿಶೇಷ ಉತ್ಸವದಲ್ಲಿ ಮೆರವಣಿಗೆ ನೆರವೇರಿಸಲಾಯಿತು.

ದೇವಾಲಯದಲ್ಲಿ ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ತಾಯಿಗೆ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಜೀವನದಿ ಕಾವೇರಿ ತಟದಲ್ಲಿ ದೀಪಾರತಿ ನೆರವೇರಿಸಲಾಯಿತು. ಬಳಿಕ ದೇವಾಲಯದ ಇಒ ಸಿ.ಜಿ.ಕೃಷ್ಣ ಹಾಗೂ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್.ಎನ್.ದಯಾನಂದ್ ಅವರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನಡೆಯಿತು.

ಹೂವು, ವಸ್ತ್ರಗಳ ಸಹಿತ ಆಭರಣಗಳಿಂದ ಸರ್ವಾಲಂಕೃತಗೊಂಡಿದ್ದ ದೇವಿಯನ್ನು ತಳಿರು ತೋರಣಗಳ ಜತೆಗೆ ವರ್ಣರಂಜಿತ ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ಬೆಳ್ಳಿ ಸಾರೋಟಿನಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಗಂಜಾಂನ ದೊಡ್ಡ ಬೆಸ್ತಗೇರಿ, ಭುಸಿಗೌಡನ ವೃತ್ತ, ರಾಮಮಂದಿರ ಬೀದಿ, ಅಂಬೇಡ್ಕರ್ ಬೀದಿ, ದನ ತಡೆಯೋ ಬೀದಿ, ಮಾರಿಗುಡಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ದೇವರ ಉತ್ಸವ ಸಂಚರಿಸಿತು. ಪುರಜನರು ದೇವಿಗೆ ಹಣ್ಣು-ಕಾಯಿ ತೋರಿ ಕರ್ಪೂರ ಬೆಳಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಒಳಿತಿಗಾಗಿ ಪ್ರಾರ್ಥಿಸಿದರು. ದೇವಾಲಯ ಆಡಳಿತ ದೇವಿಯ ಆಚರಣೆಯನ್ನು ತಡರಾತ್ರಿವರೆಗೂ ನೆರವೇರಿಸಿ ಸಂಪ್ರದಾಯ ಕಾರ್ಯಗಳನ್ನು ಸಂಪನ್ನಗೊಳಿಸಿದರು.