ಬೆಂಗಳೂರು: ಭಾರತದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಮತ್ತು ಸ್ವಯಂ-ಹಾನಿ ಸಮಸ್ಯೆ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಆತ್ಮಹತ್ಯೆ ತಡೆಗಟ್ಟುವಿಕೆ ಕೇಂದ್ರ ಪ್ರಾರಂಭಿಸಲು ಸಜ್ಜಾಗಿದೆ.
ಪ್ರಸ್ತುತ ಒತ್ತಡದ ಜೀವನ ಸೇರಿ ನಾನಾ ಕಾರಣಗಳಿಂದ ಮಾನಸಿಕ ಆರೋಗ ಸಾರ್ವಜನಿಕವಾಗಿ ಸವಾಲಾಗಿದೆ. ಇದು ತುರ್ತು ಮತ್ತು ಸಮಗ್ರ ಮಧ್ಯಸ್ಥಿಕೆಯ ಬೇಡಿಕೆಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ನಿಮ್ಹಾನ್ಸ್ ಸೆ. 10ರಂದು ಆಚರಿಸಲಾಗುತ್ತಿರುವ ವಿಶ್ವ ಅತ್ಮಹತ್ಯೆ ತಡೆಗಟ್ಟುವಿಕೆ ದಿನದಂದು ಸಾಮಾನ್ಯ ಆಸ್ಪತ್ರೆಗಳಲ್ಲಿ ಸ್ವಯಂ ಹಾನಿಕಾರಕ ರೋಗಿಗಳಿಗೆ ಮಾನಸಿಕ ಆರೋಗ್ಯ ಮೌಲ್ಯಪಾನದ ಮತ್ತು ಆರೈಕೆ ಯೋಜನೆ ಸುಧಾರಿಸಲು ಕಾರ್ಯಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಭಾರತದಲ್ಲಿ ಆತ್ಮಹತ್ಯೆಯು ಸಾವಿಗೆ ಪ್ರಮುಖ ಕಾರಣವಾಗಿದ್ದು, ರಾಜ್ಯದ ಸಾಮಾನ್ಯ ಆಸ್ಪತ್ರೆಗಳಲ್ಲಿ ಸ್ವಯಂ-ಹಾನಿಕಾರಕ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯ ಪ್ರಕಾರ ಭಾರತದಲ್ಲಿ 2022 ರಲ್ಲಿ 1.7 ಲಕ್ಷ ಆತ್ಮಹತ್ಯೆಗಳು ವರದಿಯಾಗಿವೆ. ಈ ನಿಟ್ಟಿನಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲು ಆತ್ಮಹತ್ಯೆ ತಡೆಗಟ್ಟುವಿಕೆ ಕೇಂದ್ರೆ ನೆರವಾಗಲಿದೆ ಎನ್ನುತ್ತಾರೆ ನಿಮ್ಹಾನ್ಸ್ ಆಸ್ಪತ್ರೆ ವೈದ್ಯರು.
ನಗರ ಸ್ವಯಂ-ಹಾನಿ ಅಧ್ಯಯನ (ಯುಎಸ್‌ಎಚ್‌ಎಎಸ್): ಕರ್ನಾಟಕ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಿಮ್ಹಾನ್ಸ್ ರಾಜ್ಯದ ಐದು ಜನರಲ್ ಆಸ್ಪತ್ರೆಗಳಲ್ಲಿ ಹಾಗೂ ಮೈಸೂರು ಮತ್ತು ಚಾಮರಾಜನಗರದಲ್ಲಿ ತಲಾ ಒಬ್ಬರಂತೆ ಅರ್ಬನ್ ಸೆಲ್ಫ್ ಎಂಬ ಯೋಜನೆಯಡಿ ಪುನರಾವರ್ತಿತ ಆತ್ಮಹತ್ಯೆ ಯತ್ನ ಅಥವಾ ಸ್ವಯಂ-ಹಾನಿ ಕುರಿತು ಸಮೀಕ್ಷೆ ನಡೆಸಿ ವರದಿ ಮಾಡಿದೆ. ಇದರಿಂದ 7,201 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಸಲಹೆ ನೀಡುವ ಮೂಲಕ ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಸಮೀಕ್ಷಕರು.
ಈ ಯೋಜನೆಯು ಆತ್ಮಹತ್ಯೆ ಪ್ರಯತ್ನಗಳಿಂದ ಬದುಕುಳಿದವರಲ್ಲಿ ಆತ್ಮಹತ್ಯೆಯ ಉದ್ದೇಶ ತಿಳಿದು, ಮೌಲ್ಯಮಾಪನ ಮಾಡಿ ತಿಳುವಳಿಕೆ ನೀಡುವ ಮೂಲಕ ಭವಿಷ್ಯದ ಪುನಃ ಪ್ರಯತ್ನ ಮಾಡುವುದನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ. 2022ರ ಆಗಸ್ಟ್‌ನಲ್ಲಿ ಯೋಜನೆ ಪ್ರಾರಂಭಿಸಿ 2024ರ ಜುಲೈ ವರೆಗೆ ಏಳು ಆಸ್ಪತ್ರೆಗಳಿಂದ 3,027 ಮಹಿಳೆಯರು, 376 ಮಕ್ಕಳು ಮತ್ತು ಏಳು ತೃತೀಯ ಲಿಂಗಿಗಳು ಒಳಗೊಂಡಂತೆ 7,201 ವ್ಯಕ್ತಿಗಳ ಕುರಿತು ಅಧ್ಯಯನ ನಡೆಸಿದಾಗ ಇವರು ಸ್ವಯಂ-ಹಾನಿ ಅಥವಾ ಹಿಂದಿನ ಜೀವನವನ್ನು ಅಂತ್ಯಗೊಳಿಸಲು ಪ್ರಯತ್ನಿಸಿದ್ದಾರೆ ತಿಳಿದು ಬಂದಿದೆ. ಹಾಗಾಗಿ ಈ ಯೋಜನೆಗೆ ಇನ್ನೂ ಎಂಟು ಆಸ್ಪತ್ರೆಗಳನ್ನು ಸೇರಿಸಲು ಯೋಚಿಸಲಾಗಿದೆ ಎನ್ನುತ್ತಾರೆ ವೈದ್ಯರು.
ಮಾನಸಿಕ ಆರೋಗ್ಯ ಮೌಲ್ಯಮಾಪನ: ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಮಾನಸಿಕ ಆರೋಗ್ಯ ಮೌಲ್ಯಮಾಪನ ಅವಶ್ಯಕವಾಗಿದೆ. ಇದರಿಂದ ಮೂಲ ಕಾರಣಗಳನ್ನು ತಿಳಿದು ಪರಿಹರಿಸಲು ಮತ್ತು ಪರಿಣಾಮಕಾರಿ ಆರೈಕೆಯನ್ನು ಒದಗಿಸುವಲ್ಲಿ ಹೊಸ ಕೇಂದ್ರವು ನಿರ್ಣಾಯಕ ಪಾತ್ರ ವಹಿಸಲಿದೆ. ಇದು ಸಾಮಾನ್ಯ ಆಸ್ಪತ್ರೆಗಳಲ್ಲಿ ಸ್ವಯಂ-ಹಾನಿಕಾರಕ ರೋಗಿಗಳಿಗೆ ಮಾನಸಿಕ ಆರೋಗ್ಯ ಮೌಲ್ಯಮಾಪನ ಮತ್ತು ಆರೈಕೆ ಯೋಜನೆ ಸಾಮರ್ಥ್ಯವನ್ನು ಸುಧಾರಿಸಲು ಸಮಗ್ರ ಕಾರ್ಯಕ್ರಮ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸುವ ಮೂಲಕ ಅತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.