ಹುಬ್ಬಳ್ಳಿ: ರೈತ ಹೋರಾಟಗಾರ, ಬಿಜೆಪಿ ಮುಖಂಡ ಹಾಗೂ ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದರು.
ಅವರಿಗೆ 76 ವರ್ಷ ವಯಸ್ಸಾಗಿತ್ತು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗೆಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಸಂಗೇದೇವರಕೊಪ್ಪ ಗ್ರಾಮದ ರೈತ ಕುಟುಂಬದಿಂದ ಬಂದಿದ್ದ ನಿಂಬಣ್ಣವರ ಎಂಎ ಹಾಗೂ ಎಲ್ಎಲ್ಬಿ ಪದವಿ ಪಡೆದಿದ್ದರು. ಮೈಸೂರು ವಿವಿಯಿಂದ ಬಿ.ಇಡಿ ಪದವಿ ಪಡೆದಿದ್ದರು. ಕೆಲಕಾಲ ಶಿಕ್ಷಕರಾಗಿದ್ದರು.
1995ರಲ್ಲಿ ಬಿಜೆಪಿ ಸೇರಿದ ಇವರು ಸಕ್ರಿಯ ರಾಜಕೀಯದಲ್ಲಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಂತೋಷ ಲಾಡ್ ಅವರ ವಿರುದ್ಧ ಬಿಜೆಪಿಯಿಂದ ಸ್ಪಧಿರ್ಸಿ ಜಯ ಸಾಧಿಸಿದ್ದರು. 2023ರ ಚುನಾವಣೆಯಲ್ಲಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಕಲಘಟಗಿ ಕ್ಷೇತ್ರದ ಅಭಿವೃದ್ಧಿಗೆ ಸದಾ ಕಾಯೋರ್ನ್ಮುಖರಾಗಿರುತ್ತಿದ್ದ ನಿಂಬಣ್ಣವರ, ಶಾಸಕರಾಗಿ ಹಲವು ಯೋಜನೆಗಳನ್ನು ತಂದಿದ್ದರು. ಈಗಾಗಲೇ ಅನೇಕ ಯೋಜನೆಗಳು ಜಾರಿಯಾಗಿವೆ. ಇನ್ನೂ ಕೆಲವು ಪೂರ್ಣಗೊಳ್ಳುವ ಹಂತದಲ್ಲಿವೆ.
ಭಾನುವಾರ ಸಂಜೆ ವೇಳೆಗೆ ಅವರ ಪಾರ್ಥೀವ ಶರೀರವನ್ನು ಕಲಘಟಗಿಗೆ ತರಲಾಗುತ್ತಿದ್ದು, ಸೋಮವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಹೇಳಲಾಗಿದೆ.