ಸಿಂದಗಿ: ಪಟ್ಟಣದ ಗ್ರಾಮ ದೇವತೆ ನೀಲಗಂಗಾ ದೇವಿಯ ಜಾತ್ರೆ ನಿಮಿತ್ತ ಗುರುವಾರ ಪಲ್ಲಕ್ಕಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಮೂಲ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ದೇವಿ ನೀಲಗಂಗಮ್ಮಳನ್ನು ಸಕಲ ವಾದ್ಯ ವೈಭವಗಳೊಂದಿಗೆ ಹಳೆಯ ಬಜಾರದ ಬಸವಣ್ಣ ದೇವರ ಗುಡಿಗೆ ಕರೆ ತರಲಾಯಿತು.
ಅಲ್ಲಿ ಪ್ರತಿ ವರ್ಷದಂತೆ ಹರಕೆ ಹೊತ್ತ ನೂರಾರು ಮಕ್ಕಳು, ಹಿರಿಯರು, ಮಹಿಳೆಯರು ಸೇರಿ ಅನ್ಯ ರಾಜ್ಯಗಳಿಂದ ಬಂದ ಭಕ್ತರು ನೀಲಗಂಗಾದೇವಿಯ ಪಲ್ಲಕ್ಕಿಯಡಿಯಲ್ಲಿ ಉರುಳು ಸೇವೆ ಮಾಡಿ ಧನ್ಯತೆ ಮೆರೆದರು.
ಪಲ್ಲಕ್ಕಿ ಮೆರವಣಿಗೆಯಲ್ಲಿ ಪುರವಂತರ ಸೇವೆ, ಡೊಳ್ಳಿನ ಸೇವೆ, ನಂದಿಕೋಲ ಸೇವೆ, ದಿವಟಗಿ ಸೇವೆ ಸೇರಿ ಭಜಂತ್ರಿ ಸಮಾಜದ ಕುಟುಂಬಗಳು ಡಾಲ್ಬಿ, ಭಾಜಾ ಭಜಂತ್ರಿಗಳಿಂದ ಮನರಂಜನೆ ನೀಡಿದರೆ, ಇತರ ಸಮಾಜದವರು ತಮ್ಮ ವಾರ್ಷಿಕ ಸೇವೆಗಳನ್ನು ಸಲ್ಲಿಸಿ ಕೃತಾರ್ಥ ಭಾವ ತಳೆದರು.
ನಗರದ ಹಾಲುಮತ ಸಮುದಾಯದ ಯುವಕ ಸಂಘ ಡೊಳ್ಳಿನ ಗಾಯನದ ಮೂಲಕ ತಮ್ಮ ಸೇವೆ ಅರ್ಪಿಸಿದ ನಂತರ ಪಲ್ಲಕ್ಕಿ ಮರಳಿ ಮೂಲ ದೇವಸ್ಥಾನಕ್ಕೆ ತಲುಪಿತು.
ಪಲ್ಲಕ್ಕಿ ಮಹೋತ್ಸವದಲ್ಲಿ ಸಿಂದಗಿ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹಾಗೂ ದೇವರಮನಿಯ ಧರ್ಮದರ್ಶಿ ಸುನೀಲಗೌಡ ಪವಾಡಿ ನೇತೃತ್ವ ವಹಿಸಿದ್ದರು.
ಅಶೋಕ ದೇವರಮನಿ, ಡಾ. ಶರಣು ಜೋಗೂರ, ಸುಧೀರ ದೇವರಮನಿ, ಪುರಾಣಿಕ ಹಿರೇಮಠ, ಶರಣಯ್ಯ ನಂದಿಕೋಲ, ಗಂಗಯ್ಯ ನಂದಿಕೋಲ, ಅಪ್ಪು ತಾರಾಪೂರ, ಮಲ್ಲು ಅಲ್ಲಾಪೂರ, ಅನೀಲಗೌಡ ಬಿರಾದಾರ, ಕುಮಾರ ಪಟ್ಟಣಶೆಟ್ಟಿ, ಸಿದ್ದು ಪಟ್ಟಣಶೆಟ್ಟಿ, ವೀರಭದ್ರ ಪಟ್ಟಣಶೆಟ್ಟಿ, ಅನೀಲ ಪಟ್ಟಣಶೆಟ್ಟಿ, ಮುತ್ತು ಪಟ್ಟಣಶೆಟ್ಟಿ, ಪ್ರೊ.ಶಿವಶರಣ ಬೂದಿಹಾಳ, ಮುತ್ತು ಮಂದೇವಾಲಿ, ಮುತ್ತು ಅಂಬಲಗಿ ಇತರರಿದ್ದರು.