ಜಿಲ್ಲೆ

ನಿಖಿಲ್​ ಕುಮಾರಸ್ವಾಮಿ- ರೇವತಿ ನಿಶ್ಚಿತಾರ್ಥ; ರಾಜಕೀಯ, ಸಿನಿಮಾ, ಉನ್ನತಾಧಿಕಾರಿಗಳ ಉಪಸ್ಥಿತಿ

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟ್​ ಎಂಡ್​ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು.

ಸಾಂಪ್ರದಾಯಿಕ ಶೈಲಿಯ ಉಡುಗೆಯಲ್ಲಿ ನಿಖಿಲ್ ಮತ್ತು ರೇವತಿ ಕಂಗೊಳಿಸಿದರು. ಪಿಂಕ್ ಕಲರ್ ಸೀರೆಯಲ್ಲಿ ರೇವತಿ ಕಂಗೊಳಿಸಿದರೆ, ಕ್ರೀಮ್ ಕಲರ್ ಕುರ್ತಾದಲ್ಲಿ ನಿಖಿಲ್ ಮಿಂಚುತ್ತಿದ್ದರು. ನಿಖಿಲ್ ಕುಮಾರ್ ಅವರ ಫೇಸ್​ಬುಕ್ ಪೇಜ್​ನಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮದ ಲೈವ್ ಪ್ರಸಾರ ಮಾಡಲಾಗುತ್ತಿದೆ.

ಮಾಜಿ ಪ್ರಧಾನಿ ಮತ್ತು ಅಜ್ಜ ದೇವೇಗೌಡರ ದಂಪತಿ ಸಮಕ್ಷಮದಲ್ಲಿ ವಜ್ರದುಂಗುರ ಬದಲಾಯಿಸಿಕೊಂಡರು. ದೇವೇಗೌಡರ ಅಳಿಯ ಡಾ. ಮಂಜುನಾಥ್ ಸೇರಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ನಿಖಿಲ್​ ಕುಮಾರಸ್ವಾಮಿ ರೇವತಿ ನಿಶ್ಚಿತಾರ್ಥಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ನಿವೃತ್ತ ಡಿಜಿ ಐಜಿಪಿ ನೀಲಮಣಿ ಎನ್. ರಾಜು, ಮಾಜಿ ಡಿಸಿಎಂ ಜಿ ಪರಮೇಶ್ವರ್, ಮಾಜಿ ಸಚಿವ ಡಿ.ಕೆ. ಶಿವಕುಮಾರ್​, ಬಸವರಾಜ​ ಹೊರಟ್ಟಿ, ಶಾಸಕ ಎಂ. ಕೃಷ್ಣಪ್ಪ ದಂಪತಿ, ಮಾಜಿ ಶಾಸಕ ಪ್ರಿಯಕೃಷ್ಣ ಕುಟುಂಬ ಮತ್ತಿತರ ಗಣ್ಯರು ಸಾಕ್ಷಿಯಾದರು.

ನಿಶ್ಚಿತಾರ್ಥದ ಮಂಟಪವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ಅದಕ್ಕಾಗಿ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಬೆಳೆಯುವ ಬಿಳಿಯ ಬಣ್ಣದ ಹೂವುಗಳನ್ನು ತರಿಸಲಾಗಿದೆ. ದೆಹಲಿಯಿಂದ ಕ್ರಿಸ್ಟಲ್ಸ್‌ಗಳನ್ನು ತರಿಸಿ ಅಲಂಕಾರಕ್ಕೆ ಬಳಸಿಕೊಳ್ಳಲಾಗಿದೆ.

ವಿವಾಹ ಭೋಜನವಿದು: ನಿಶ್ಚಿತಾರ್ಥದಲ್ಲಿ ಸುಮಾರು 35 ರೀತಿಯ ಕರ್ನಾಟಕ ಶೈಲಿಯ ಖಾದ್ಯಗಳನ್ನು ಅತಿಥಿಗಳು ಸವಿಯುತ್ತಿದ್ದಾರೆ. ಬಾಳೆ ಎಲೆ ಮತ್ತು ಬಫೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಆಗಮಿಸಿದ ತಕ್ಷಣ ನೀಡಲು 9 ಬಗೆಯ ವೆಲ್​ಕಮ್​ ​ಡ್ರಿಂಕ್ಸ್​ಗಳಿವೆ. ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಸೇರಿ ಒಟ್ಟು 10 ಬಗೆಯ ವ್ಯಂಜನಗಳಿವೆ. ಅನ್ನ ಮತ್ತು ಪಲ್ಯಗಳ ಪಟ್ಟಿಯಲ್ಲಿ 14 ವಿವಿಧ ಬಗೆಯ ಖಾದ್ಯಗಳಿವೆ. ಮೈಸೂರುಪಾಕ್​ ಹಾಗೂ ಒಣ ಹಣ್ಣುಗಳ ಪಾಯಸ ಸೇರಿ 7 ಬಗೆಯ ಸಿಹಿ ಆಹಾರಗಳನ್ನು ತಯಾರಿಸಲಾಗಿದೆ.