ಜಿಲ್ಲೆ

ಸಂತ್ರಸ್ತೆಯರಿಗೆ ಎಸ್‌ಐಟಿಯಿಂದ ಒತ್ತಡ: ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪ

ಕೆ.ಎನ್.ರಾಘವೇಂದ್ರ

ಮಂಡ್ಯ: ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರಿಗೆ ಎಸ್‌ಐಟಿಯವರು ಒತ್ತಡ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತೆಯರ ಮುಖ ಬ್ಲರ್ ಮಾಡದೇ ಪೆನ್‌ಡ್ರೈವ್ ಹಂಚಿರುವ ಪಾಪಿಗಳ ವಿರುದ್ಧ ತನಿಖೆ ಆಗಬೇಕು. ರಾಜ್ಯ ಸರ್ಕಾರ ಎಲ್ಲವನ್ನು ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಚಲುವರಾಯಸ್ವಾಮಿ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸುಮ್ಮನ್ನೆ ಅಪಪ್ರಚಾರ ಮಾಡುವುದು ಆರೋಪ ಮಾಡುವುದು ಸೂಕ್ತ ಇಲ್ಲ. ಈ ತನಿಖೆಯನ್ನು ಸಿಬಿಐಗೆ ಕೊಡಿ ಎಂದು ಒತ್ತಾಯಿಸಿದರು.

ಸಂತ್ರಸ್ತೆಯರಿಗೆ ಎಸ್‌ಐಟಿಯವರು ಒತ್ತಡ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಎಸ್‌ಐಟಿ ಸ್ವತಂತ್ರರಿದ್ದಾರೆ. ಆದರೆ ಸಂತ್ರಸ್ತೆಯರ ನೋವು, ಅವರ ಕುಟುಂಬದ ನೋವು ಇದೆ. ಅವರಿಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ. ಈ ಪ್ರಕರಣವನ್ನು ಸಿಬಿಐಗೆ ಕೊಟ್ಟು ಕೂಲಂಕಷವಾಗಿ ತನಿಖೆ ಮಾಡಲಿ. ಸತ್ಯಸತ್ಯತೆ ಹೊರ ಬೀಳಲಿ. ಈ ಮುಜುಗರಕ್ಕೆ ಯಾರು ಕಾರಣ ಎಂಬ ತನಿಖೆ ಆಗಬೇಕು. ಉಪ್ಪು ತಿಂದವರು ನೀರು ಕುಡಿಯಬೇಕು. ಪ್ರಜ್ವಲ್ ಅವರನ್ನು ಕುಮಾರಣ್ಣ ಮೊದಲ ದಿನವೇ ಅಮಾನತು ಮಾಡಿದ್ದಾರೆ ಎಂದರು.

ಆರೋಪ ಬಂದಾಗ ನಾವು ತಪ್ಪಿಸಿಕೊಳ್ಳುವ ಪ್ರಶ್ನೆ ಇಲ್ಲ. ಈಗಾಗಲೇ ಈ ಸಂಬಂಧ ತನಿಖೆ ನಡೆಯುತ್ತಿದೆ. ಆದರೆ ತನಿಖೆ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಇದೆ. ಈ ಬಗ್ಗೆ ನಾವು ಈಗಾಗಲೇ ನಾವು ಸಭೆ ನಡೆಸಿದ್ದೇವೆ. ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಾದ ಸರ್ಕಾರ, ಅವರನ್ನು ಬೀದಿಗೆ ತಂದಿದೆ. ಹೆಣ್ಣು ಮಕ್ಕಳ ಕುಟುಂಬದ ಗತಿ ಏನು. ಜೀವಕ್ಕೆ ಅಪಾಯ ಬಂದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು.

ನರೇಂದ್ರಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ. ದೇಶದ ರಕ್ಷಣೆ, ಅಭಿವೃದ್ಧಿ ವಿಚಾರದಲ್ಲಿ ಅವರು ಮಾಡಿದ ಕೆಲಸ ಗೆಲುವಿಗೆ ಕಾರಣವಾಗಲಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳ ಗೆಲುವು ಖಚಿತ. ಮಂಡ್ಯದಲ್ಲಿಯೂ ಕುಮಾರಸ್ವಾಮಿ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. ಚುನಾವಣೆಯಲ್ಲಿ ದುಡಿದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯ ಕಟ್ಟಲು ಹಾಗೂ ಕುಮಾರಸ್ವಾಮಿ ಅವರ ರೈತಪರ ಕಾಳಜಿ ಗಮನಿಸಿ ರಾಷ್ಟ್ರೀಯ ನಾಯಕರು ಶಕ್ತಿ ತುಂಬುತ್ತಾರೆ ಎಂದು ನಂಬಿಕೆ. ಅದರಂತೆ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇತರರಿದ್ದರು.