ಜಿಲ್ಲೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಆರೋಪ

ಮಂಡ್ಯ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಅಂತೆಯೇ ಪೊಲೀಸರು ಯಾವುದೇ ಕ್ರಮ ವಹಿಸಬಾರದೆಂದು ರಾಜ್ಯ ಸರ್ಕಾರ ಒತ್ತಡ ಹೇರಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಘಟನೆ ಮಾತ್ರವಲ್ಲ. ಇಂತಹ ಸಾಕಷ್ಟು ಘಟನೆಗಳು ಜರುಗುತ್ತಿವೆ. ಶ್ರೀರಾಮನವಮಿ ದಿನ ಅಲ್ಲಾ ಹು ಅಕ್ಬರ್ ಎಂದು ಕೂಗಿ ಎಂದು ಪ್ರಚೋದನೆ ಮಾಡಿದ್ದಾರೆ. ನರೇಂದ್ರಮೋದಿ ಅವರ ಗೀತೆ ನೋಡುವಾಗ ಆ ಹುಡುಗನಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ನಮ್ಮ ಚಿತ್ರರಂಗದ ನಟ-ನಟಿಯರ ಮೇಲೆ ಹಲ್ಲೆಯಾಗಿದೆ. ರಾಮೇಶ್ವರಂ ಕೆಫೆ ಸ್ಫೋಟ, ಇದೆಲ್ಲಾ ಉದಾಹರಣೆ ಎಂದರು.

ಮಂಡ್ಯ ಲೋಕಸಭಾ ಕ್ಷೇತ್ರದ ಹಲವೆಡೆ ಪ್ರಚಾರ ಮಾಡಿದ್ದೇವೆ. ಜನರು ಉತ್ತಮ ಪ್ರತಿಕ್ರಿಯೆ ನೀಡುತ್ತಾ ಇದ್ದಾರೆ. ಕುಮಾರಣ್ಣ ಸಾರಾಯಿ, ಲಾಟರಿ ನಿಷೇಧ ಮಾಡಿದ್ದನ್ನು ಜನರು ಮರೆತಿಲ್ಲ. ಮಂಡ್ಯ ಜಿಲ್ಲೆಗೆ ಎಚ್‌ಡಿಕೆ ಏನು ಮಾಡಿದ್ದಾರೆ ಎಂದು ದಾಖಲೆಗಳು ಇವೆ. ಜಿಲ್ಲೆಯ ಜನರ ಮನಸ್ಸಿನಲ್ಲಿ ಕುಮಾರಣ್ಣನ ಅಭಿವೃದ್ಧಿ ಇದೆ. ಹೇಳಿದರೆ ಎರಡು ದಿನ ಮಾತಾಡಬಹುದು. 11 ತಿಂಗಳಿನಿಂದ ಕಾಂಗ್ರೆಸ್ ಸರ್ಕಾರ ಸದುಪಯೋಗಪಡಿಸಿಕೊಳ್ಳಬೇಕು. ಕಾಂಗ್ರೆಸ್ ಅವರು ಹೇಳುವುದಕ್ಕೆ ನಾವು ಉತ್ತರಕೊಡಲು ಸಮಯ ಇಲ್ಲ. ಮಂಡ್ಯ ಜನರು ಎಲ್ಲವನ್ನು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.