ಜಿಲ್ಲೆ

ಚನ್ನಪಟ್ಟಣದಿಂದ ನಿಖಿಲ್​ ಸ್ಪರ್ಧೆ?

ಗಂಗಾಧರ ಬಿ ವಿ

ಪಕ್ವವಲ್ಲದ ಕಾಲದಲ್ಲಿ ಶಸ್ತ್ರಾಭ್ಯಾಸ- ಸಿಪಿವೈ ದೆಹಲಿ ಯಾತ್ರೆ

ಗಂಗಾಧರ್​ ಬೈರಾಪಟ್ಟಣ

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಟಿಕೆಟ್​ ಗೊಂದಲ ಬಿಗಡಾಯಿಸುತ್ತಲೇ ಇದೆ. ಒಮ್ಮೆ ಪ್ರತ್ಯಕ್ಷಗೊಂಡ ಮತ್ತೊಮ್ಮೆ ನಾಪತ್ತೆ ಆಗುತ್ತಿದ್ದ ನಿಖಿಲ್​ ಕುಮಾರಸ್ವಾಮಿ ಹೆಸರು, ಈಗ ಮತ್ತೆ ಚಾಲ್ತಿಗೆ ಬಂದಿದೆ.

ಕುಮರಸ್ವಾಮಿ ಅವರ ರಾಜೀನಾಮೆಗೂ ಮುನ್ನವೇ ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸದಿಂತೆ ಉಂಟಾದ ಗೊಂದಲ ಮುಂದುವರಿದೇ ಇದೆ. ಒಂದೆಡೆ ಮತಗೆ ಟಿಕೆಟ್​ ನೀಡಬೇಕು ಎನ್ನುವ ಪಟ್ಟನ್ನು ಸಿ.ಪಿ.ಯೋಗೇಶ್ವರ್​ ಅವರು ಸಡಿಸಲೇ ಇಲ್ಲ. ಮತ್ತೊಂದೆಡೆ ನಿಖಿಲ್​ ಕುಮಾರಸ್ವಾಮಿ ಅವರನ್ನು ಕರತರುವ ಪ್ರಯತ್ನವನ್ನು ಜೆಡಿಎಸ್​ನ ಕೆಲಸ ಸ್ಥಳಿಯ ಮುಖಂಡರೂ ಬಿಟ್ಟಿಲ್ಲ.

ಆದರೂ ಯೋಗೇಶ್ವರ್​ ಅವರಿಗೆ ಮೈತ್ರಿ ಟಿಕೆಟ್​ ದೊರೆಯಲಿದೆ ಎನ್ನುವ ಸುದ್ದಿ ಕ್ಷೇತ್ರದಲ್ಲಿ ಹರಿದಾಡುತ್ತಿದ್ದಂತೆ ಈಗ ನಿಖಿಲ್​ ಕುಮಾರಸ್ವಾಮಿ ಕ್ಷೇತ್ರದಲ್ಲಿ ಸಂಚಾರ ಮಾಡುವ ಕೆಲಸಕ್ಕೆ ಮುಂದಾಗುವ ಮೂಲಕ, ಸ್ಪರ್ಧೆಗೆ ಇಳಿಯಲಿದ್ದಾರೆಯೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ. ಇಂದಿನಿಂದ ಪ್ರವಾಸ: ನಿಖಿಲ್​ ಕುಮಾರಸ್ವಾಮಿ ಕ್ಷೇತ್ರದಲ್ಲಿ ಇಂದಿನಿಂದ ಸಂಚಾರ ಆರಂಭಿಸಿದ್ದಾರೆ. ಈ ಮೂಲಕ ಉಪ ಚುನಾವನೆ ಸಮರಕ್ಕೆ ಸಿದ್ದತೆಯನ್ನು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮೊದಲಿಗೆ ಹೊಂಗನೂರು ಜಿಪಂ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ದಿನ ಪೂರ್ತಿ ತೆರಳುವ ನಿಖಿಲ್​, ಆರಂಭದಲ್ಲಿ ಕೆಂಗಲ್​ ಆಂಜನೇಯನಿಗೆ ಪೂಜೆ ಸಲ್ಲಿಸಲಿದ್ದಾರೆ.

ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ?:

ಸಾಲು ಸಾಲು ಸೋಲಗಳನ್ನು ಕಂಡಿರುವ ನಿಖಿಲ್​ ಕುಮಾರಸ್ವಾಮಿ ಅವರ ರಾಜಕೀಯ ಏಳ್ಗೆಗೆ ಒಂದು ಗೆಲುವಿನ ಅಗತ್ಯವಿದೆ. ಆದರೆ ಸದ್ಯದ ಮಟ್ಟಿಗೆ ಚನ್ನಪಟ್ಟಣ ಅವರ ಗೆಲುವಿಗೆ ಹೇಳಿ ಮಾಡಿಸಿದಂತೆ ಮಾತ್ರ ಇಲ್ಲ. ಅವರ ತಂದೆ ಎಚ್​.ಡಿ.ಕುಮಾರಸ್ವಾಮಿ ಸ್ಫರ್ಧೆ ಮಾಡಿದ ಎರಡೂ ಅವಧಿಯಲ್ಲಿ ಕಾಂಗ್ರೆಸ್​ ಅಷ್ಟೊಂದು ಗಟ್ಟಿಯಾಗಿರಲಿಲ್ಲ. ಆದರೆ ಈ ಬಾರಿ ಚನ್ನಪಟ್ಟಣ ಕಾಂಗ್ರೆಸ್​ ಪಾಲಿಗೆ ಪಡೆಯಲೇಬೇಕಾದ ವಿಜಯಮಾಲೆ. ಇದನ್ನು ಅಷ್ಟು ಸುಲಭಕ್ಕೆ ಪಡೆಯಲು ಸಾಧ್ಯವಿಲ್ಲ ಎನ್ನುವ ಸತ್ಯ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಇದೆ. ಆದರೆ ಸಿ.ಪಿ.ಯೋಗೇಶ್ವರ್​ ಅವರಿಗೆ ಮೈತ್ರಿ ಟಿಕೆಟ್​ ದೊರೆಯದಿದ್ದರೆ ಅವರ ಸ್ವತಂತ್ರ ಸ್ಫರ್ಧೆ ಖಚಿತವಾಗಿರುವ ಇಂತಹ ಸಂದರ್ಭದಲ್ಲಿ ನಿಖಿಲ್​ ರಾಜಕೀಯ ಯಾತ್ರೆ ಮತ್ತಷ್ಟು ಕಠಿಣವಾಗಲಿದೆ.

ಮತ್ತೆ ಸಿಪಿವೈ ದೆಹಲಿಗೆ?

ಸ್ವಾಭಿಮಾನಿ ಸಮಾವೇಶದ ಮೂಲಕ ತಮಗೆ ಟಿಕೆಟ್​ ತಪ್ಪಿಸಲು ಮುಂದಾಗಿರುವವರಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದ ಸಿ.ಪಿ.ಯೋಗೇಶ್ವರ್​ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಹೈ ಕಮಾಂಡ್​ ನಂತರ ಬರಿಗೈಲಿ ವಾಪಸ್​ ಕಳುಹಿಸಿ ಒಂದು ವಾರ ಕಾಲಾವಕಾಶ ಕೋರಿತ್ತು. ಈಗ ಮತ್ತೊಮ್ಮೆ ಯೋಗೇಶ್ವರ್​ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದ್ದು, ಪಕ್ಷದ ದೆಹಲಿ ವರಿಷ್ಠರು ಯಾವ ಸೂಚನೆ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಪಕ್ಷ$ವು ಮೈತ್ರಿ ಧರ್ಮ ಪಾಲನೆಗೆ ಸೂಚನೆ ನೀಡಿದರೂ, ಇದಕ್ಕೆ ಬೆನ್ನು ಮಾಡುವ ಹಂತಕ್ಕೂ ಯೋಗೇಶ್ವರ್​ ಮಾನಸಿಕವಾಗಿ ಸಿದ್ದವಾಗಿದ್ದಾರೆ ಎಂದು ಅವರ ಆಪ್ತ ಬಳಗ ಹೇಳುತ್ತಿದೆ. ಇದರ ನಡುವೆ ನಿಖಿಲ್​ ಯಾತ್ರೆ ಸಿಪಿವೈ ಹಠವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಲಾಗಿದೆ.

ಕೈ ಟಿಕೆಟ್​ ಸಹ ಖಾತ್ರಿ ಇಲ್ಲ

ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಚನ್ನಪಟ್ಟಣ ಕ್ಷೇತ್ರವನ್ನು ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಇದಕ್ಕಾಗಿ ಇರುವ ಎಲ್ಲಾ ದಾರಿಗಳು ಮತ್ತು ಅವಕಾಶಗಳನ್ನು ಬಳಕೆ ಮಾಡಿಕೊಂಡು ರಾಜಕೀಯ ದಾಳವನ್ನು ಉರುಳಿಸುತ್ತಲೇ ಇದ್ದಾರೆ.

ಆರಂಭಿಸಿದ್ದ ತಾನೇ ಸ್ಪರ್ಧಿ ಎಂದು ಹೇಳಿ ನಂತರ ತಮ್ಮ ಹೆಸರನ್ನು ತಾವೇ ಕೈ ಬಿಟ್ಟಿದ್ದ ಡಿಕೆಶಿ, ಮತ್ತೊಮ್ಮೆ ತಾನೇ ಅಭ್ಯರ್ಥಿ ಎಂದು ಹೇಳುವ ಮೂಲಕ ಕೈ ಟಿಕೆಟ್​ ಸಹ ಯಾರಿಗೆ ಎನ್ನುವ ಕುತೂಹಲವನ್ನು ಪ್ರಶ್ನಾರ್ಥಕವಾಗಿಯೇ ಇಟ್ಟಿದ್ದಾರೆ.

ನಿಖಿಲ್​ ಕ್ಷೇತ್ರಯಾತ್ರೆ, ಸಿ.ಪಿ.ಯೋಗೇಶ್ವರ್​ ಟಿಕೆಟ್​ ಹಂಬಲ ಮತ್ತು ಡಿ.ಕೆ.ಶಿವಕುಮಾರ್​ ಅವರ ರಾಜಕೀಯ ತಂತ್ರಗಾರಿಕೆ ಚನ್ನಪಟ್ಟಣ ಕಣ ರಂಗೇರುವಂತೆ ಮಾಡುತ್ತಿದೆ.